ಬೆಂಗಳೂರು, ಸೆ 25(DaijiworldNews/PY): ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ, ಎಸ್ಡಿಪಿಐ ಕಚೇರಿ ಸೇರಿದಂತೆ 30ಕ್ಕೂ ಅಧಿಕ ಸ್ಥಳಗಳ ಮೇಲೆ ಗುರುವಾರ ದಾಳಿ ನಡೆಸಿದ್ದು, ಪ್ರಕರಣದ ಪ್ರಮುಖ ಸಂಚುಕೋರನೊಬ್ಬನನ್ನು ಬಂಧಿಸಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
ದಾಳಿ ನಡೆಸಿದ್ದ ಸಂದರ್ಭ ಅಧಿಕಾರಿಗಳು ಕೆಜಿ ಹಳ್ಳಿಯ ಸೈಯದ್ ಸಾದಿಕ್ ಎಂಬಾತನನ್ನು ಬಂಧಿಸಿದ್ದು, ಅಲ್ಲದೇ, ದಾಳಿಯಲ್ಲಿ ಈತನದು ಪ್ರಮುಖ ಪಾತ್ರವಿದೆ ಎನ್ನಲಾಗುತ್ತಿದೆ.
ಶೋಧಕಾರ್ಯದ ಸಂದರ್ಭ ಏರ್ಗನ್, ಕಬ್ಬಿಣದ ಸರಳುಗಳು, ಡಿಜಿಟಲ್ ಸಾಧನಗಳು ಸೇರಿದಂತೆ ಮಾರಕಾಸ್ತ್ರ, ಡಿವಿಆರ್, ಎಸ್ಡಿಪಿಐ ಹಾಗೂ ಪಿಎಫ್ಐ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಾದಿಕ್ ಎಂಬಾತ ಖಾಸಗಿ ಬ್ಯಾಂಕ್ಗಳ ಸಾಲ ವಸೂಲಾತಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಅಲ್ಲದೇ, ಎಸ್ಡಿಪಿಐ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ಆ.11ರಂದು ಕೆಜಿ ಹಳ್ಳಿ ಠಾಣೆ ಮೇಲೆ ನಡೆದ ದಾಳಿಯ ಪ್ರಮುಖ ಸಂಚುಕೋರನಾಗಿದ್ದ ಎಂದು ಎನ್ಐಎ ಮಾಹಿತಿ ನೀಡಿದೆ.
ಈ ಗಲಭೆಯ ಪ್ರಕರಣದ ಸಂಬಂಧ ಕೆಲವು ಆರೋಪಿಗಳಿಗೆ ಉಗ್ರ ಸಂಘಟನೆಯ ನಂಟು ಹೊಂದಿದೆ ಎಂಬ ವಿಚಾರ ಸಿಸಿಬಿಯ ತನಿಖೆಯ ಸಂದರ್ಭ ತಿಳಿದು ಬಂದಿತ್ತು. ಈ ಬಗ್ಗೆ ಸರ್ಕಾರವು ಹೆಚ್ಚಿನ ತನಿಖೆ ನಡೆಸಲು ಎನ್ಐಎಗೆ ವಹಿಸಿದೆ.