ಕೋಲ್ಕತಾ, ಸೆ. 25(DaijiworldNews/HR): ಪಶ್ಚಿಮ ಬಂಗಾಳದ ಅಧಿಕಾರರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಸಾಲಿನ ದುರ್ಗಾ ಪೂಜೆಯ ಸಮಿತಿಗಳಿಗೆ ತಲಾ 50,000 ಅನುದಾನವನ್ನು ಘೋಷಿಸಿದ್ದಾರೆ.
ಸುಮಾರು 28,000 ದುರ್ಗಾ ಪೂಜಾ ಸಮಿತಿಗಳು ಪಶ್ಚಿಮ ಬಂಗಾಳದಲ್ಲಿದ್ದು, ಈ ಎಲ್ಲ ಸಮಿತಿಗಳಿಗೂ ತಲಾ 50,000 ರೂ. ಅನುದಾನ ಸಿಗಲಿದೆ. ಕಳೆದ ಬಾರಿ ಪ್ರತಿ ಸಮಿತಿಗೆ 25,000 ರೂ. ನೀಡಲಾಗಿದ್ದು, ಈ ಬಾರಿ ಅದರ ದುಪ್ಪಟ್ಟು ಹಣ ನೀಡಲಾಗುತ್ತಿದೆ. ಜೊತೆಗೆ ಈ ಸಮಿತಿಗಳಿಗೆ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯಿಂದ ಶೇ 50ರಷ್ಟು ರಿಯಾಯಿತಿ ಕೂಡ ಘೋಷಿಸಲಾಗಿದೆ.
ಮಮತಾ ಬ್ಯಾನರ್ಜಿ ದುರ್ಗಾ ಪೂಜೆ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಪೂಜೆಗೆ ಹಾಕುವ ಪೆಂಡಾಲ್ಗಳು ನಾಲ್ಕೂ ಕಡೆಯಿಂದ ತೆರೆದಿರಬೇಕು. ಪೆಂಡಾಲ್ ಪ್ರವೇಶ ಭಾಗದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇರಿಸಬೇಕು. ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿದೆ. ಹಾಗೆಯೇ ಪೂಜೆ ವೇಳೆ ದೈಹಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.