ಜಮ್ಮು-ಕಾಶ್ಮೀರ, ಸೆ. 25(DaijiworldNews/HR): ಜಮ್ಮು-ಕಾಶ್ಮೀಕ್ಕೆ ಇದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370 ಮತ್ತು 35ಎ ಯನ್ನು ತೆಗೆದುಹಾಕಿದ ನಂತರ ಕಾಶ್ಮೀರ ಆಡಳಿತದಿಂದ ಮುಸಲ್ಮಾನರನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಪ್ರಮುಖ ಹುದ್ದೆಗಳು ಹಿಂದೂಗಳ ಪಾಲಾಗಿವೆ ಎಂಬುದಾಗಿ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಆರೋಪಿಸಿದ್ದಾರೆ.
ಈ ಕುರಿತು ಲೈವ್ ವೆಬ್ ಚಾಟ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರ ಮುಸಲ್ಮಾನರು ಬಹುಸಂಖ್ಯಾತರಾಗಿರುವ ಪ್ರದೇಶ. ಭಾರತ ಬಹುಸಂಖ್ಯಾತ ಹಿಂದೂ ರಾಷ್ಟ್ರ ಎಂದು ಸಂಪೂರ್ಣ ತಿಳುವಳಿಕೆ ಇದ್ದುಕೊಂಡೇ ನಾವು ಭಾರತದ ಜೊತೆಗೆ ಸೇರಿದ್ದೆವು. ಅಂದಿನ ಉನ್ನತ ನಾಯಕ ಸರ್ದಾರ್ ವಲ್ಲಭಬಾಯಿ ಪಟೇಲ್ , ಜವಹರಲಾಲ್ ನೆಹರೂ ಅವರು ಅಮೆರಿಕದಲ್ಲಿದ್ದಾಗ ಸಂವಿಧಾನ ವಿಧಿ 370ನ್ನು ತಂದಿದ್ದರು. ಬಹುಸಂಖ್ಯಾತ ಮುಸಲ್ಮಾನರ ಗೌರವ, ಘನತೆಯನ್ನು ಎತ್ತಿ ಹಿಡಿಯುತ್ತೇವೆ, ಕಾಪಾಡುತ್ತೇವೆ ಎಂಬ ಭರವಸೆಯೊಂದಿಗೆ ಸಂವಿಧಾನ ವಿಧಿ 370ನ್ನು ತಂದರು. ಈಗ ಎಲ್ಲಿಗೆ ಹೋಯಿತು ಎಂಬುದಾಗಿ ಪ್ರಶ್ನಿಸಿದ್ದಾರೆ.
ಕೇಂದ್ರದ ನಾಯಕರು ನನಗೆ ಸಂಸತ್ತಿನಲ್ಲಿ ಮಾತನಾಡಲು ಕೂಡ ಬಿಡುವುದಿಲ್ಲ. ಅವರ ಉದ್ದೇಶ ಏನೆಂದು ನೀವು ಭಾವಿಸಿಕೊಳ್ಳಬೇಕು. ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಮಾಡಿದ್ದರಿಂದ ಏನು ಪಡೆದುಕೊಂಡಿದ್ದೇವೆ, ಏನು ಕಳೆದುಕೊಂಡಿದ್ದೇವೆ ಎಂದು ಸದನದಲ್ಲಿ ಚರ್ಚೆ ಮಾಡೋಣ ಎಂದು ನಾವು ಕೇಳಿದೆವು. ಕಾಂಗ್ರೆಸ್ ನವರು ನಮ್ಮ ಜೊತೆ ಮಾತುಕತೆಗೆ ಜೊತೆಯಾಗುತ್ತೇವೆ ಎಂದರು.
ಇನ್ನು ಕಾಶ್ಮೀರದ ಭೌಗೋಳಿಕ ಸ್ಥಿತಿ ಬದಲಾಗಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಿಂದೆಯಾದರೆ ಇಲ್ಲಿ ಕಾಶ್ಮೀರಿ ಪಂಡಿತರಿದ್ದರು. ಆದರೆ ಇಂದು ಕಾಶ್ಮೀರಿ ಮುಸ್ಲಿಮರು ಮಾತ್ರ ಇದ್ದಾರೆ. ಕಾಶ್ಮೀರಿ ಪಂಡಿತರು ಇಲ್ಲಿನ ಭಾಗವಲ್ಲ ಎಂದು ನಾವು ಯಾವತ್ತೂ ಹೇಳಲಿಲ್ಲ. ಅವರು ತೊರೆದು ಹೋಗಲು ಬೇರೆ ಇತರ ಶಕ್ತಿಗಳು ಕಾರಣವೇ ಹೊರತು ನಾವಲ್ಲ ಎಂದು ಹೇಳಿದ್ದಾರೆ.