ಬೆಂಗಳೂರು, ಸೆ 25(DaijiworldNews/PY): ಪ್ರತಿ ಆರು ತಿಂಗಳಿಗೊಮ್ಮೆ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತಿದ್ದರೆ ನನಗೂ ವಿಶ್ವಾಸ ಬರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಪ್ರತಿ ಆರು ತಿಂಗಳಿಗೊಮ್ಮೆ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತಿರಲಿ. ಹೀಗೆ ಮಾಡುತ್ತಿದ್ದರೆ, ನನಗೂ ವಿಶ್ವಾಸ ಬರುತ್ತದೆ. ನನಗೂ ವಿಶ್ವಾಸ ಮೂಡಿಸುವ ಕಾರ್ಯವನ್ನು ಕಾಂಗ್ರೆಸ್ನವರು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ನಿನ್ನೆ ವಿಧಾನಸಭೆ ಅಧಿವೇಶನದ ಸಂದರ್ಭ ಕಾಂಗ್ರೆಸ್ ಪಕ್ಷ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಈ ಬಗ್ಗೆ ಕಾಂಗ್ರೆಸ್ನ 23 ಶಾಸಕರು ಬೆಂಬಲ ಸೂಚಿಸಿದ್ದರು. ಹಾಗಾಗಿ ಅವಿಶ್ವಾಸ ಮಂಡನೆಗೆ ಕೋರಂ ಇದೆ ಎಂದು ಸ್ಪೀಕರ್ ಕಾಗೇರಿ ಹೇಳಿದ್ದು, ಇಂದು ಅಥವಾ ನಾಳೆ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದಾರೆ.
ರೈತ ಸಂಘದ ಮುಖಂಡರನ್ನು ಭೇಟಿಯಾಗುವಂತೆ ಹೇಳಿದ್ದೇನೆ. ಇಲ್ಲಿಯವರೆಗೆ ಶೇ.2ರಷ್ಟು ಭೂಮಿಯನ್ನು ಮಾತ್ರವೇ ಬಳಕೆ ಮಾಡಲಾಗುತ್ತಿದ್ದು, ಯಾರೇ ಆದರೂ ನೀರಾವರಿ ಭೂಮಿಯನ್ನು ಖರೀದಿ ಮಾಡಿದರೂ ಕೂಡಾ ರೈತರಿಗೆ ಯಾವುದೇ ರೀತಿಯಾದ ತೊಂದರೆ ಆಗುವುದಿಲ್ಲ. ಈ ವಿಚಾರವಾಗಿ ರೈತರಿಗೆ ಮನವರಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.