ನವದೆಹಲಿ,ಸೆ. 25(DaijiworldNews/HR): ರೈತರಿಗೆ ಈ ಹಿಂದಿನ ಸರ್ಕಾರಗಳು ತಂದಿದ್ದ ಹಲವು ಭರವಸೆಗಳು, ಕಾನೂನುಗಳು ಜಟಿಲವಾಗಿದ್ದವು, ಆದರೆ ಅದು ರೈತರಿಗೆ ಅರ್ಥವಾಗುತ್ತಿರಲಿಲ್ಲ. ಆದರೆ ನಮ್ಮ ಎನ್ ಡಿಎ ಸರ್ಕಾರ ಸತತವಾಗಿ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದು ರೈತರ ಕಲ್ಯಾಣಕ್ಕಾಗಿ ಹಲವು ಸುಧಾರಣೆಗಳನ್ನು ತರುತ್ತಿದೆ, ಆದರೆ ಈ ಮಸೂದೆ ಬಗ್ಗೆ ಸುಳ್ಲು ವದಂತಿಗಳನ್ನು ಹಬ್ಬಿ ರೈತರನ್ನು ಹಾದಿ ತಪ್ಪಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ದೆಹಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯ ಸ್ಥಾಪನೆ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಕೆಲ ವರ್ಷಗಳಲ್ಲಿ ಎನ್ ಡಿಎ ಸರ್ಕಾರ ಬ್ಯಾಂಕುಗಳ ಜೊತೆ ರೈತರನ್ನು ನಿರಂತರವಾಗಿ ಸಂಪರ್ಕಿಸುವ ಸಂಪೂರ್ಣ ಪ್ರಯತ್ನ ಮಾಡುತ್ತಿದ್ದು, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ 10 ಕೋಟಿಗೂ ಅಧಿಕ ರೈತರ ಖಾತೆಗಳಿಗೆ 1 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ಅತಿ ಹೆಚ್ಚು ರೈತರಿಗೆ ನೀಡುವ ಮೂಲಕ ಅವರಿಗೆ ಸುಲಭವಾಗಿ ಸಾಲ ದೊರಕುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ ಎಂಬುದಾಗಿ ಮೋದಿ ಹೇಳಿದ್ದಾರೆ.
ಇನ್ನು ತಳಮಟ್ಟದಲ್ಲಿ ರೈತರನ್ನು ತಲುಪುವ ಕೆಲಸವನ್ನು ಎಲ್ಲಾ ಬಿಜೆಪಿ ಕಾರ್ಯಕರ್ತರು ಮಾಡಬೇಕು, ನೂತನ ಕೃಷಿ ಮಸೂದೆಯ ಅಗತ್ಯದ ಬಗ್ಗೆ ರೈತರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಿಹೇಳಬೇಕು ಮತ್ತು ಈ ಮಸೂದೆ ಬಗ್ಗೆ ಹಬ್ಬಿಸುತ್ತಿರುವ ವದಂತಿಗಳು, ಸುಳ್ಳು ಆರೋಪಗಳನ್ನು ಹೊಸಕಿ ಹಾಕಬೇಕಾಗಿದೆ ಎಂಬುದಾಗಿ ಹೇಳಿದ್ದಾರೆ.