ಚೆನ್ನೈ, ಸೆ 25(DaijiworldNews/PY): ಹಿರಿಯ ಗಾಯಕ, ಎಸ್.ಪಿ.ಬಾಲಸುಬ್ರಹ್ಮಣ್ಯ (74) ಅವರು ಸೆ.25ರ ಶುಕ್ರವಾರದಂದು ನಿಧನರಾಗಿದ್ದಾರೆ.
ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ಪಿಬಿ ಇಂದು ನಿಧನರಾಗಿದ್ದಾರೆ.
ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಎಸ್ಪಿ ಅವರನ್ನು ಆ. ಆ.5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ. 13ರ ತಡರಾತ್ರಿಯಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ವೈದ್ಯರ ತಂಡ ಕೂಡಾ ಚಿಕಿತ್ಸೆ ನೀಡುತ್ತಿದ್ದರು. ಆ.24ರಂದು ಕೊರೊನಾ ವರದಿ ನೆಗೆಟಿವ್ ಬಂದಿತ್ತು. ಗುರುವಾರ ಸಂಜೆ ಆಸ್ಪತ್ರೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಲ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿತ್ತು. ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
ಸ್ವರ ಸಂಗೀತ ಲೋಕದ ಮೋಡಿಗಾರ ಎಂದೇ ಪ್ರಸಿದ್ಧರಾದ ಎಸ್.ಪಿ. ಬಿ ಅವರು 16 ಭಾಷೆಗಳಲ್ಲಿ ಸುಮಾರು 40 ಸಾವಿರ ಹಾಡುಗಳನ್ನು ಹಾಡಿದ್ದು, 6 ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ದಕ್ಷಿಣ ಭಾರತದ ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಇವರು ಗಾಯನದಲ್ಲಿ ಮಾತ್ರವಲ್ಲದೇ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆಯಲ್ಲೂ ಸಾಧನೆ ಮಾಡಿದ್ದಾರೆ.