ಬೆಂಗಳೂರು, ಸೆ 25(DaijiworldNews/PY): ನನಗೆ ಭೂ ಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಮಸೂದೆಯ ವಿರುದ್ದ ಹೋರಾಟ ಮಾಡಿ ಸಾಕಾಗಿದೆ. ಆದರೆ, ನಾನು ಎಂದಿಗೂ ಶಸ್ತ್ರ ತ್ಯಾಗ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ವಿಚಾರವಾಗಿ ಜೆಡಿಎಸ್ ಪ್ರತಿಭಟನೆ ನಡೆಸಿದೆ. ಆದರೆ, ಅವಸರವಾಗಿ ಈ ಕಾಯ್ದೆ ಸುಗ್ರೀವಾಜ್ಞೆ ತರುವ ಅಗತ್ಯವೇನಿತ್ತು ಎಂದು ಕೇಳಿದ್ದಾರೆ.
ಈ ಕಾಯ್ದೆಯ ಸುಗ್ರೀವಾಜ್ಞೆ ತರುವ ಮೊದಲು ಇದರ ಸಾಧಕ-ಬಾಧಕಗಳ ಬಗ್ಗೆ ಮಾತುಕತೆ ನಡೆಸಬೇಕಿತ್ತು. ಈ ಕಾಯ್ದೆಯ ಅನುಕೂಲ, ಉದ್ದೇಶದ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಅಲ್ಲದೇ, ಯಾವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ ಎನ್ನುವ ವಿಚಾರವನ್ನು ಪ್ರಸ್ತಾಪ ಮಾಡಬೇಕಿತ್ತು. ಆದರೆ, ಈ ಬಗ್ಗೆ ಸರ್ಕಾರ ಯಾವುದೇ ಚರ್ಚೆ ಮಾಡಿಲ್ಲ. ಹಾಗಾಗಿ ಸರ್ಕಾರ ಈ ಕಾಯ್ದೆಯಿಂದ ಹಿಂದೆ ಸರಿಯಬೇಕು ಎಂದಿದ್ದಾರೆ.
ಕಾಂಗ್ರೆಸ್ ಅವಿಶ್ವಾಸ ನಿರ್ಣಯದ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ಸಿಗರು ಈವರೆಗೆ ನಮ್ಮೊಂದಿಗೆ ಚರ್ಚೆ ಮಾಡಿಲ್ಲ. ಆ ವಿಚಾರ ಬಂದಾಗ ನಾನೇ ಅವರಲ್ಲಿ ಚರ್ಚೆ ಮಾಡುತ್ತೇನೆ. ಕೊರೊನಾ ಸಂದರ್ಭ ನಾವೆಲ್ಲರೂ ಜೊತೆಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅವರ ಕುಟುಂಬದ ವಿರುದ್ದ ಭ್ರಷ್ಟಾಚಾರದ ಆರೋಪದ ವಿಚಾರಾಗಿ ಮಾತನಾಡಿದ ಅವರು, ಯಾವ ಕುಟುಂಬದ ವಿರುದ್ದ ಆರೋಪ ಇಲ್ಲ ಹೇಳಿ. ಭ್ರಷ್ಟಾಚಾರದ ವಿಚಾರಗಳು ಎಲ್ಲಿಗೆ ಹೋಗಿ ಅಂತ್ಯ ಕಾಣುತ್ತದೆ ಎನ್ನುವ ವಿಚಾರ ನನಗೆ ತಿಳಿದಿದೆ ಎಂದು ತಿಳಿಸಿದ್ದಾರೆ.