ನವದೆಹಲಿ, ಸೆ. 25(DaijiworldNews/HR): ಯೆಸ್ ಬ್ಯಾಂಕ್ ಸಹ ಪ್ರವರ್ತಕ ರಾಣಾ ಕಪೂರ್ ಅವರ ಲಂಡನ್ ನಲ್ಲಿನ 127 ಕೋಟಿ ಮೌಲ್ಯದ ಫ್ಲ್ಯಾಟ್ ಅನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ ಎ) ಅಡಿ ಜಪ್ತಿ ಮಾಡಲು ತಾತ್ಕಾಲಿಕ ಆದೇಶ ನೀಡಿದೆ.
'ಫ್ಲ್ಯಾಟ್ ನ ಮಾರುಕಟ್ಟೆ ಮೌಲ್ಯವು ಸುಮಾರು 127 ಕೋಟಿ ಆಗಿದೆ. 2017ರಲ್ಲಿ ರಾಣಾ ಕಪೂರ್ ಅವರು ಜರ್ಸಿ ಲಿಮಿಟೆಡ್ ಹೆಸರಿನಲ್ಲಿ 9.9 ಮಿಲಿಯನ್ ಪೌಂಡ್ ಗೆ ಈ ಆಸ್ತಿಯನ್ನು ಖರೀದಿಸಿದ್ದು, ಅವರು ಲಾಭದಾಯಕ ಮಾಲೀಕರೂ ಆಗಿದ್ದಾನೆ' ಎಂದು ಇ.ಡಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಪಿಎಂಎಲ್ ಎ ಅಡಿಯಲ್ಲಿ ಇತರ ತನಿಖೆಗಳ ಭಾಗವಾಗಿ, ಈ ಹಿಂದೆ ಅಮೆರಿಕ, ದುಬೈ ಮತ್ತು ಆಸ್ಟ್ರೇಲಿಯಾಗಳಲ್ಲಿ ಇದೇ ರೀತಿ ಆಸ್ತಿಗಳನ್ನು ಇಡಿ ಜಪ್ತಿ ಮಾಡಿದೆ.
ಕಪೂರ್ ಕುಟುಂಬಕ್ಕೆ ನೀಡಿದ ಕಿಕ್ ಬ್ಯಾಕ್ ಗೆ ಪ್ರತಿಯಾಗಿ ಯೆಸ್ ಬ್ಯಾಂಕ್ ವಿವಿಧ ಸಂಸ್ಥೆಗಳಿಗೆ ಬಹುಕೋಟಿ ಸಾಲ ನೀಡಿದೆ ಎಂದು ಸಿಬಿಐ ಎಫ್ ಐಆರ್ ನಲ್ಲಿ ಸಿಬಿಐ ತನಿಖೆ ನಡೆಸಿದ ನಂತರ ಕಪೂರ್, ಅವರ ಕುಟುಂಬ ಸದಸ್ಯರು ಮತ್ತು ಇತರರ ವಿರುದ್ಧ ಇಡಿ ಪ್ರಕರಣ ದಾಖಲಿಸಿತ್ತು.