ಶಿಲ್ಲಾಂಗ್, ಸೆ. 25(DaijiworldNews/HR): ಮೇಘಾಲಯದಲ್ಲಿ ಕಳೆದ ಕೆಲ ದಿನಗಳಿಂದ ಧಾರಕಾರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಭೂಕುಸಿತ ಉಂಟಾಗಿ ಮಹಿಳಾ ಕ್ರಿಕೆಟ್ ಆಟಗಾರ್ತಿಯೊಬ್ಬರು ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾದ ಘಟನೆ ಈಸ್ಟ್ ಕಾಶಿ ಹಿಲ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ಮಹಿಳಾ ಕ್ರಿಕೆಟ್ ಆಟಗಾರ್ತಿಯನ್ನು ರಜಿಯಾ ಅಹ್ಮದ್ (30 ವರ್ಷ) ಎಂದು ಗುರುತಿಸಲಾಗಿದೆ. ರಜಿಯಾ ಮೇಘಲಾಯ ರಾಜ್ಯವನ್ನು ಹಲವು ಟೂರ್ನಿಗಳಲ್ಲಿ ಪ್ರತಿನಿಧಿಸಿದ್ದಾರೆ. ಇದೀಗ ಅವಶೇಷಗಳಡಿಯಲ್ಲಿ ರಜಿಯಾ ಅಹ್ಮದ್ ಅವರ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಎಸ್ ಪಿ ಸಿಲ್ವೆಸ್ಟರ್ ನಾಂಗ್ಟಿಂಗರ್ ಅವರು ಮಾಹಿತಿ ನೀಡಿದ್ದು, ಪೊಲೀಸ್ ಮತ್ತು ಹೋಮ್ ಗಾರ್ಡ್ ತಂಡ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಹಿಳೆಯ ದೇಹ ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಮೇಘಾಲಯದಲ್ಲಿ ಭಾರಿ ಅವಾಂತರ ಸೃಷ್ಟಿ ಮಾಡಿದ್ದು, ರಾಜಧಾನಿ ಶಿಲ್ಲಾಂಗ್ ನ ಹಲವು ಪ್ರಮುಖ ಪ್ರದೇಶಗಳು ಜಲಾವೃತ್ತವಾಗಿವೆ.