ನವದೆಹಲಿ,ಸೆ.26 (DaijiworldNews/HR): ನೂತನವಾಗಿ ಅಂಗೀಕಾರಗೊಂಡ ಕೃಷಿ ಮಸೂದೆಗಳನ್ನು ಇಡೀ ದೇಶವೇ ವಿರೋಧಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ರೈತರಿಗೆ ನಂಬಿಕೆ ಇಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ರೈತರಿಗೆ ಮೋದಿ ಸರ್ಕಾರದ ಬಗ್ಗೆ ಯಾವುದೇ ನಂಬಿಕೆಯಿಲ್ಲ ಎಂಬುದು ರೈತರೊಂದಿಗೆ ಮಾತನಾಡಿದ ನಂತರ ಸ್ಪಷ್ಟವಾಗಿದೆ. ನಮ್ಮ ಧ್ವನಿಗಳು ನಮ್ಮ ರೈತ ಸದಾ ಇದೆ. ಇಂದು ಇಡೀ ದೇಶವು ಈ ಕೃಷಿ ಮಸೂದೆಗಳನ್ನು ವಿರೋಧಿಸುತ್ತದೆ' ಎಂಬುದಾಗಿ ಬರೆದುಕೊಂಡಿದ್ದಾರೆ.
ಇನ್ನು ರಾಹುಲ್ ಗಾಂಧಿ ಅವರು ಟ್ವೀಟರ್ ನಲ್ಲಿ ಹಂಚಿಕೊಂಡಿರುವ ರೈತರೊಂದಿಗಿನ ಅವರ ಸಂವಾದದ ವಿಡಿಯೊದಲ್ಲಿ, ಈ ಕಾನೂನುಗಳು ದೇಶಾದಾದ್ಯಂತ ಇರುವ ರೈತರ ವಿರುದ್ಧವಾಗಿದೆ ಎಂದು ಹೇಳಲಾಗಿದ್ದು, ಈ ಮಸೂದೆಗಳಿಂದ ಸಾರ್ವಜನಿಕರಿಗೆ ಅಥವಾ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಇದು ನಿಗಮಗಳಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ' ಎಂದು ರೈತರೊಬ್ಬರು ಹೇಳಿರುವುದು ಕೂಡ ವಿಡಿಯೊದಲ್ಲಿದೆ.
ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಇತ್ತೀಚೆಗೆ ಧ್ವನಿ ಮತದಿಂದ ಅಂಗೀಕಾರಗೊಂಡಿತ್ತು.