ಬೆಂಗಳೂರು, ಸೆ.26 (DaijiworldNews/HR): ಬಿಎಸ್ ವೈ ಸರ್ಕಾರ ಮತ್ತೊಮ್ಮೆ ಇಕ್ಕಟಿಗೆ ಸಿಲುಕಿದ್ದು, ತಮ್ಮ ಸರ್ಕಾರ ಸುರಕ್ಷಿತವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಬೇಕಾದ ಪರೀಕ್ಷೆಗೆ ಬಿಜೆಪಿ ಸರ್ಕಾರ ಸಿದ್ದವಾಗಿದೆ.
ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ , ರಾಜ್ಯ ಸರ್ಕಾರದ ಮಂತ್ರಿ ಮಂಡಲದ ಮೇಲೆ ನಮಗೆ ನಂಬಿಕೆಯಿಲ್ಲ. ನಮಗೆ ಅವಿಶ್ವಾಸ ಮಂಡನೆಗೆ ಅವಕಾಶ ಕೊಡಬೇಕು ಎಂದು ಸ್ವೀಕರ್ಗೆ ಮನವಿ ಮಾಡಿದ್ದಾರೆ. ಇದಕ್ಕೆ ಅನುಮತಿ ನೀಡಿರುವ ಸಭಾಧ್ಯಕ್ಷರು ಅವಿಶ್ವಾಸ ಮಂಡನೆಗೆ ಅನುಮತಿ ನೀಡಲಿದ್ದಾರೆ.
ಈ ಕುರಿತು ಯಡಿಯೂರಪ್ಪ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆದಿದ್ದು,. ಸಭೆಯಲ್ಲಿ 80ಕ್ಕೂ ಹೆಚ್ಚು ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದು, ಕೊರೊನಾದಿಂದ 15ಕ್ಕೂ ಹೆಚ್ಚು ಶಾಸಕರು ಗೈರಾಗಿದ್ದಾರೆ. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಕುರಿತು ಚರ್ಚೆ ನಡೆಸಿದ್ದು, ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವುದರ ಕುರಿತು ನಾಯಕರು ಚರ್ಚಿಸಿದ್ದಾರೆ.
ಅವಿಶ್ವಾಸ ಮಂಡನೆಯಾಗುತ್ತಿರುವ ಹಿನ್ನಲೆ ಎಲ್ಲಾ ಬಿಜೆಪಿ ಶಾಸಕರು ಸದನಕ್ಕೆ ಕಡ್ಡಾಯವಾಗಿ ಹಾಜರಿರಬೇಕು ಎಂದು ಸಿಎಂ ಯಡಿಯೂರಪ್ಪ ವಿಪ್ ಜಾರಿಮಾಡಿದ್ದಾರೆ. ಅಲ್ಲದೇ ಬೆಳಗ್ಗೆಯಿಂದ ಸಂಜೆವರೆಗೂ ಸದನದಲ್ಲಿ ಹಾಜರಿರಬೇಕು. ಯಾರು ಗೈರಾಗಬಾರದು ಎಂದು ತಿಳಿಸಿದ್ದಾರೆ.