ಬೆಂಗಳೂರು, ಸೆ.26 (DaijiworldNews/HR): ವಿಧಾನಸಭೆ ಅಧಿವೇಶನದಲ್ಲಿ ಭೂ ಸುಧಾರಣಾ ತಿದ್ದುಪಡಿ ಮಸೂದೆ ಮತ್ತು ಎಪಿಎಂಸಿ ವಿಧೇಯಕ ಮಂಡನೆಯಾಗಲಿದ್ದು, ಕಾಂಗ್ರೆಸ್ ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸಿದ್ದು, ಕೊರೊನಾ ಪರಿಣಾಮ ಮತ ವಿಭಜನೆ ಬದಲಾಗಿ ಧ್ವನಿ ಮತಕ್ಕೆ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ.
ಅವಿಶ್ವಾಸ ನಿರ್ಣಯ ಮಂಡನೆ ಹಿನ್ನೆಲೆಯಲ್ಲಿ ಧ್ವನಿಮತಕ್ಕೆ ಹಾಕುವ ಕುರಿತು ಸ್ಪೀಕರ್ ಮನವಿ ಮಾಡಿಕೊಂಡರು. ಬಳಿಕ ಸಚಿವ ಮಾಧುಸ್ವಾಮಿ ಕೂಡ ವಿರೋಧ ಪಕ್ಷದ ಬಳಿ ಮನವಿ ಮಾಡಿಕೊಂಡರು. ಕಡ್ಡಾಯ ಮಾಡುವುದಾದರೆ ಪಿಪಿಇ ಕಿಟ್ ಹಾಕಿ ಕರೆದುಕೊಂಡು ಬರಬೇಕಾಗುತ್ತದೆ. ಈ ಕಾರಣಕ್ಕಾಗಿ ವಿರೋಧ ಪಕ್ಷ ಸಹಕಾರ ನೀಡಬೇಕು. ಮತಕ್ಕೆ ಹಾಕುವುದಾದರೆ ನಮ್ಮ ಸದಸ್ಯರನ್ನು ತಯಾರು ಮಾಡಿದ್ದೇವೆಂದು ಹೇಳಿದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ, ಎರಡೂ ಪಕ್ಷದ ಶಾಸಕರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ನಮಗೂ ಸಾಮಾಜಿಕ ಜವಾಬ್ದಾರಿ ಇದೆ. ಅವಿಶ್ವಾಸ ನಿರ್ಣಯ ಮಂಡನೆ ಮಾಡಿ ಮತಕ್ಕೆ ಹಾಕುವಂತೆ ಸಾಮಾನ್ಯವಾಗಿ ಬೇಡಿಕೆ ಇಡುತ್ತೇವೆ. ಮನುಷ್ಯತ್ವ, ಜೀವನ ಮುಖ್ಯ ಎಂಬ ಕಾರಣದಿಂದ ಮಾನವೀಯ ದೃಷ್ಟಿಯಿಂದ ನಿಮ್ಮ ಮನವಿ ಮೇಲೆಗೆ ಮತ ವಿಭಜನೆ ಬದಲಾಗಿ ಧ್ವನಿ ಮತಕ್ಕೆ ಹಾಕುತ್ತೇವೆಂದು ಎಂಬುದಾಗಿ ಹೇಳಿದ್ದಾರೆ.
ಇನ್ನು ವಿಧಾನಸಭೆಯಲ್ಲಿ ಭೂ ಸುಧಾರಣಾ ತಿದ್ದುಪಡಿ ಮಸೂದೆ ಹಾಗೂ ಎಪಿಎಂಸಿ ವಿಧೇಯಕ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದ್ದು, ಎಲ್ಲಾ ಶಾಸಕರು ಕಡ್ಡಾಯವಾಗಿ ಹಾಜರಾಗಲು ಕಾಂಗ್ರೆಸ್ ಸೂಚಿಸಿದೆ. ವಿಧಾನಸಭೆ, ಪರಿಷತ್ ಕಾಂಗ್ರೆಸ್ ಶಾಸಕರಿಗೆ ಪ್ರತಿಪಕ್ಷದ ಮುಖ್ಯ ಸಚೇತಕರು ವಿಪ್ ಜಾರಿ ಮಾಡಿದ್ದಾರೆ.