ಬೆಂಗಳೂರು, ಸೆ. 26 (DaijiworldNews/MB) : ಭಾರೀ ವಿರೋಧಕ್ಕೆ ಕಾರಣವಾಗಿರುವ ಕರ್ನಾಟಕ ಭೂ ಕಂದಾಯ ಸುಧಾರಣಾ ತಿದ್ದುಪಡಿ ಮಸೂದೆಯನ್ನು ವಿರೋಧ ಪಕ್ಷಗಳ ವಿರೋಧದ ನಡುವೆಯೂ ಶನಿವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
ಕೃಷಿ ಭೂಮಿಯನ್ನು ಯಾರೂ ಬೇಕಾದರೂ ಖರೀದಿಸಲು ಅನುಮತಿ ನೀಡುವ ಈ ವಿಧೇಯಕದ ಬಗ್ಗೆ ವಿಧಾನಸಭೆಯಲ್ಲಿ ಭಾರೀ ಚರ್ಚೆ ನಡೆದಿದ್ದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದೆ. ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆಯೆ ಈ ವಿಧೇಯಕವನ್ನು ಅಂಗೀಕರಿಸಲಾಗಿದೆ.
ಈ ವಿಧೇಯಕದ ಬಗ್ಗೆ ಚರ್ಚೆ ನಡೆಸಿದ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ಈ ವಿಧೇಯಕವು ರೈತರ ಪಾಲಿಗೆ ಮರಣ ಶಾಸನವಾಗಿದೆ. ರೈತರನ್ನು ಈ ವಿಧೇಯಕವು ದಿವಾಳಿ ಮಾಡುತ್ತದೆ. ಹಳ್ಳಿಗಾಡಿನ ಆರ್ಥಿಕತೆ ಅಧೋಗತಿಗೆ ತಲುಪುತ್ತದೆ. ದೇವರಾಜ ಅರಸರ ಕಾಲದ ಕಾಯಿದೆಯ ಆತ್ಮವನ್ನೆ ಈ ತಿದ್ದುಪಡಿ ಕೊಲ್ಲಲಿದೆ. ಈ ಕಾಯ್ದೆಯ ವಿರುದ್ದ ಜನರು ರೈತರು, ಕಾರ್ಮಿಕರು ತೀವ್ರ ಆಕ್ರೋಶಕ್ಕೆ ಒಳಗಾಗಿದ್ದು 28 ರಂದು ರೈತ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಆರ್ ಆಶೋಕ್ ಅವರು, ಈ ಮಸೂದೆಯು ಕೃಷಿಯಲ್ಲಿ ಒಲವು ಇರುವ ಜನರಿಗೆ ಉಪಯುಕ್ತವಾಗಲಿದ್ದು ಬೀಳು ಬಿದ್ದ ಜಮೀನಿನ ಉಪಯೋಗವನ್ನು ಕೂಡಾ ಮಾಡಬಹುದಾಗಿದೆ. ನಾಡಿನ ಅಭಿವೃದ್ದಿಯ ದೃಷ್ಟಿಯಿಂದ ಈ ಮಸೂದೆ ಜಾರಿ ಮಾಡಲಾಗುತ್ತದೆ ಎಂದು ಸಮರ್ಥಿಸಿಕೊಂಡರು.
ಇನ್ನು ಜೆಡಿಎಸ್ ನಾಯಕ ಹೆಚ್ ಡಿ. ಕುಮಾರಸ್ವಾಮಿ ಅವರು, ಸರ್ಕಾರ ಇಷ್ಟು ತರಾತುರಿಯಲ್ಲಿ ಈ ಮಸೂದೆ ಜಾರಿಗೆ ಮುಂದಾಗಿರುವುದು ಯಾಕಾಗಿ ಎಂದು ನಮಗೆ ತಿಳಿಯುತ್ತಿಲ್ಲ. ಇದು ಈ ಸಂದರ್ಭದಲ್ಲಿ ಬೇಕೇ ಎಂದು ಪ್ರಶ್ನಿಸಿದರು.
ಈ ಚರ್ಚೆಗಳ ಬಳಿಕ ಧ್ವನಿಮತದ ಮೂಲಕ ಈ ಮಸೂದೆಗೆ ಅಂಗೀಕಾರ ನೀಡಲಾಯಿತು.