ಅಮೃತಸರ, ಸೆ. 26 (DaijiworldNews/MB) : ಕೃಷಿ ಮಸೂದೆ ವಿರುದ್ದ ದೇಶದಾದ್ಯಂತ ಆಕ್ರೋಶ ಮುಗಿಳು ಮುಟ್ಟಿದ್ದು ಪಂಜಾಬ್ನಲ್ಲಿ ಕೃಷಿ ಮಸೂದೆ ವಿರುದ್ದ ರೈತರು ರೈಲ್ ರೋಕೋ ಚಳವಳಿಯನ್ನು ಇನ್ನು ಮೂರು ದಿನಗಳ ಕಾಲ ವಿಸ್ತರಿಸಿದ್ದು ಸೆ. 29ರವರೆಗೆ ರೈಲ್ ರೋಕೋ ಚಳವಳಿ ನಡೆಯಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ ರಾಜ್ಯ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂದೇರ್ ಅವರು, ರೈಲ್ ರೋಕೋ ಚಳವಳಿಯನ್ನು ಸೆಪ್ಟಂಬರ್ 26 ರಿಂದ ಸೆಪ್ಟಂಬರ್ 29ರವರೆಗೆ ವಿಸ್ತರಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಮುಖಂಡರು, ರಾಜಕಾರಣಿಗಳು ಬಂದು ಮಾತನಾಡಲು ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಸೆಪ್ಟಂಬರ್ 27 ರಂದು ವಿವಿಧ ಮಹಿಳಾ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು ಸೆಪ್ಟಂಬರ್ 28 ರಂದು ಭಗತ್ ಸಿಂಗ್ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಯುವಕರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.