ನವದೆಹಲಿ, ಸೆ 26(DaijiworldNews/PY): ಭಾರತದಲ್ಲಿ ಒಂದೇ ದಿನ ಸುಮಾರು 85,362 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಹತ್ತು ರಾಜ್ಯಗಳ ಪಾಲು ಶೇ. 75ರಷ್ಟು ಎಂದು ಶನಿವಾರ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಉತ್ತರ ಪ್ರದೇಶ, ಒಡಿಶಾ, ದೆಹಲಿ, ಪಶ್ಚಿಮ ಬಂಗಾಳ ಹಾಗೂ ಛತ್ತೀಸಗಡದಲ್ಲಿ ಹೊಸ ಶೇ.75ರಷ್ಟು ಪ್ರಕರಣಗಳು ವರದಿಯಾಗಿವೆ.
ಕೊರೊನಾ ಸೋಂಕು ಪತ್ತೆಗಾಗಿ ಭಾರತ ಒಟ್ಟು ಏಳು ಕೋಟಿ ಪರೀಕ್ಷೆಗಳನ್ನು ನಡೆಸಿದೆ. ಪ್ರತಿದಿನ ಸುಮಾರು 14 ಲಕ್ಷ ಪರೀಕ್ಷೆಗಳನ್ನು ಮಾಡಿದೆ ಎಂದು ಸಚಿವಾಲಯ ತಿಳಿಸಿದೆ.
ಹೊಸದಾಗಿ ಪತ್ತೆಯಾದ ಕೊರೊನಾ ಪ್ರಕರಣಗಳ ಪೈಕಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಕ್ರಮವಾಗಿ 8,000 ಹಾಗೂ 7,000 ಪ್ರಕರಣಗಳು ವರದಿಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೊನಾದಿಂದಾಗಿ ಒಟ್ಟು 1,089 ಮಂದಿ ಸಾವನ್ನಪ್ಪಿದ್ದು, ಈ ಪೈಕಿ ಮಹಾರಾಷ್ಟ್ರದಲ್ಲಿ ಸುಮಾರು 416 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕ ಹಾಗೂ ಉತ್ತರಪ್ರದೇಶದಲ್ಲಿ ಕ್ರಮವಾಗಿ 86 ಹಾಗೂ 84 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.