ನವದೆಹಲಿ, ಸೆ. 26 (DaijiworldNews/MB) : ಕಳೆದ 10 ತಿಂಗಳಿಂದ ಮೆದುಳು ಕ್ಯಾನ್ಸರ್ ವಿರುದ್ದ ಹೋರಾಡುತ್ತಿದ್ದ ಪದ್ಮಭೂಷಣ ಪುರಸ್ಕೃತೆ, ಆರ್ಥಿಕ ತಜ್ಞೆ ಐಷರ್ ಅಹ್ಲುವಾಲಿಯಾ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
74 ವರ್ಷದ ಅಹ್ಲುವಾಲಿಯಾ ಅವರು ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ವಿವಾಹವಾಗಿದ್ದರು. ಅವರು ದೆಹಲಿ ಮೂಲದ ಥಿಂಕ್ ಟ್ಯಾಂಕ್ ಇಂಡಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಆನ್ ಇಂಟರನ್ಯಾಷನಲ್ ಎಕನಾಮಿಕ್ ರಿಲೇಶನ್ಸ್(ಐಸಿಆರ್ಐಇಆರ್) ಅಧ್ಯಕ್ಷರಾಗಿದ್ದರು. ಅವರು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ 2009ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ದೊರಕಿತ್ತು.
ಅವರ ನಿಧನಕ್ಕೆ ಕಿರಣ್ ಮಜುಂದಾರ್-ಶಾ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.