ನವದೆಹಲಿ, ಸೆ. 26 (DaijiworldNews/MB) : ಬಿಜೆಪಿ ಮುಖ್ಯಸ್ಥ ಜಗತ್ ಪ್ರಕಾಶ್ ನಡ್ಡಾ ಅವರು ಶನಿವಾರ ರಾಷ್ಟ್ರೀಯ ಪದಾಧಿಕಾರಿಗಳ ಹೊಸ ತಂಡವನ್ನು ಪ್ರಕಟಿಸಿದ್ದು ಹೊಸದಾಗಿ ಪದಾಧಿಕಾರಿಗಳಾಗಿ ಆಯ್ಕೆಯಾದವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಭಿನಂದಿಸಿ ಬಡವರು ಸಬಲೀಕರಣಕ್ಕಾಗಿ ಶ್ರಮಿಸಿರಿ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹೊಸ ತಂಡಕ್ಕೆ ಅಭಿನಂದನೆಗಳು. ಭಾರತದ ಜನರಿಗೆ ನಿಸ್ವಾರ್ಥವಾಗಿ ಮತ್ತು ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸುವ ನಮ್ಮ ಪಕ್ಷದ ಅದ್ಭುತ ಸಂಪ್ರದಾಯವನ್ನು ಎತ್ತಿಹಿಡಿಯುತ್ತಾರೆ ಎಂದು ನನಗೆ ವಿಶ್ವಾಸವಿದೆ. ಬಡವರು ಮತ್ತು ಬಡತನದ ಅಂಚಿನಲ್ಲಿರುವವರನ್ನು ಸಬಲೀಕರಣಗೊಳಿಸಲು ಶ್ರಮಿಸಲಿ ಎಂದು ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರು ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಹೊಸ ಸಮಿತಿಯ ವಿವರವನ್ನು ಶನಿವಾರ ಪ್ರಕಟಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾಗಿ ಸಂಸದ ತೇಜಸ್ವಿ ಸೂರ್ಯ ನೇಮಕಗೊಂಡಿದ್ದಾರೆ. ಹಾಗೆಯೇ ಸಚಿವ ಸಿ.ಟಿ.ರವಿ ಅವರನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯಾದರ್ಶಿಯಾಗಿ ನೇಮಿಸಲಾಗಿದೆ.
ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಬಿಜೆಪಿ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಟ್ಟಿಯಲ್ಲಿ ಹಲವಾರು ಮಹತ್ವದ ಬದಲಾವಣೆಗಳಾಗಿದ್ದು ಹಲವರ ಹೆಸರನ್ನು ಕೈ ಬಿಡಲಾಗಿದೆ. ಹಾಗೆಯೇ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಉತ್ತಮ ವಾಕ್ಚಾತುರ್ಯ ರೂಢಿಸಿಕೊಂಡ ಅನೇಕ ಯುವಕರಿಗೆ ಅವಕಾಶ ನೀಡಲಾಗಿದೆ.