ಮುಂಬೈ, ಸೆ. 26 (DaijiworldNews/MB) : ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ಶನಿವಾರ ಸತತ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
ದೀಪಿಕಾ ಪಡುಕೋಣೆ ಅವರನ್ನು ಎನ್ಸಿಬಿ ಶುಕ್ರವಾರ ವಿಚಾರಣೆಗೆ ಹಾಜರಾಗಲು ತಿಳಿಸಿತ್ತು. ಆದರೆ, ವಿಚಾರಣೆಗೆ ಶನಿವಾರ ಹಾಜರಾಗುವುದಾಗಿ ಹೇಳಿದ್ದರು. ಹಾಗಾಗಿ ಇಂದು ಬೆಳಗ್ಗೆ ದಕ್ಷಿಣ ಮುಂಬೈನ ಕೊಲಬಾದಲ್ಲಿರುವ ಎನ್ಸಿಬಿ ಕಚೇರಿಯಲ್ಲಿ ದೀಪಿಕಾ ಅವರು ವಿಚಾರಣೆಗೆ ಹಾಜರಾಗಿದ್ದು ಸತತ ಐದು ಗಂಟೆಗಳ ವಿಚಾರಣೆ ಬಳಿಕ ಸಂಜೆ ಕಚೇರಿಯಿಂದ ನಟಿ ತೆರಳಿದರು.
ದೀಪಿಕಾ ತಮ್ಮ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಜತೆಗೆ ಡ್ರಗ್ಸ್ ಬಗ್ಗೆ ನಡೆಸಿದ ವಾಟ್ಸ್ಆ್ಯಪ್ ಚಾಟ್ ಫೋಟೋ ವೈರಲ್ ಆಗಿದ್ದು ಇದರ ಬೆನ್ನಲ್ಲೇ ದೀಪಿಕಾ ಪಡುಕೋಣೆಗೆ ಎನ್ಸಿಬಿ ಸಮನ್ಸ್ ನೀಡಿತ್ತು. ದೀಪಿಕಾ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಅವರನ್ನು ಈಗಾಗಲೇ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಇನ್ನು ದೀಪಿಕಾ ಪಡುಕೋಣೆ ತಾವು ಡ್ರಗ್ಸ್ಗೆ ಸಂಬಂಧಪಟ್ಟಂತೆ 2017ರಲ್ಲಿ ಕರಿಷ್ಮಾ ಜತೆಗೆ ಚಾಟ್ ಮಾಡಿರುವುದು ನಿಜವಾಗಿದ್ದು ಆದರೆ ತಾವು ಡ್ರಗ್ಸ್ ಸೇವಿಸಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.