ಬೆಂಗಳೂರು, ಸೆ 27(DaijiworldNews/PY): ಕೃಷಿ ಮಸೂದೆಯನ್ನು ಖಂಡಿಸಿ ವಿವಿಧ ಸಂಘಟನೆಗಳು ಸೆ.28ರಂದು ಕರೆ ನೀಡಿರುವ ರಾಜ್ಯ ಬಂದ್ಗೆ ಹಲವು ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ.
ಸೆ.25ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ನಡೆದ ಮಾತುಕತೆ ವಿಫಲವಾದ ಬಳಿಕ ಸೆ.28ರ ಸೋಮವಾರದಂದು ಕರೆ ನೀಡಲಾಗಿದ್ದ ಬಂದ್ ಮುಂದುವರೆಯಲಿದೆ ಎಂದು ರೈತ, ದಲಿತ ಹಾಗೂ ಕಾರ್ಮಿಕರ ಐಕ್ಯ ಹೋರಾಟ ಸಮಿತಿ ತಿಳಿಸಿದೆ.
ರೈತ ವಿರೋಧಿ ಸುಗ್ರೀವಾಜ್ಞೆ ಮಸೂದೆಗಳನ್ನು ಹಿಂದಕ್ಕೆ ಪಡೆಯಲೇಬೇಕು ಎನ್ನುವ ವಿಚಾರವನ್ನು ಹೋರಾಟದ ಮೂಲಕ ಮಾಡುತ್ತೇವೆ ಎಂದು ಹೇಳಿದೆ.
ಇನ್ನು ರಾಜ್ಯದ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್ ಕೂಡಾ ಬಂದ್ಗೆ ಸಂಪೂರ್ಣ ಬೆಂಬಲ ನೀಡಿದ್ದು, ಹೋರಾಟದಲ್ಲಿ ಭಾಗವಹಿಸುವಂತೆ ತಮ್ಮ ಸದಸ್ಯರಿಗೆ ಕರೆ ನೀಡಿದೆ. ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ್ದು, ಎಂದಿನಂತೆ ಹೋಟೆಲ್ಗಳು ಕಾರ್ಯನಿರ್ವಹಿಸಲಿವೆ ಎಂದು ಹೋಟೆಲ್ ಮಾಲೀಕರ ಸಂಘ ತಿಳಿಸಿದೆ.
ಬಂದ್ಗೆ ಕರೆ ನೀಡಿದ ಹಿನ್ನೆಲೆ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಸೇರಿದಂತೆ ಸೆ.28ರಂದು ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಬಂದ್ ಹಿನ್ನೆಲೆ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅನಾನುಕೂಲವಾಗಬಹುದು ಎನ್ನುವ ನಿಟ್ಟಿನಲ್ಲಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ವಿಶ್ವ ವಿದ್ಯಾಲಯಗಳು ತಿಳಿಸಿವೆ.
ಹಾಲು, ತರಕಾರಿ ಹಾಗೂ ದಿನಸಿ ಅಂಗಡಿಗಳು, ಆಸ್ಪತ್ರೆಗಳು, ಔಷಧ ಅಂಗಡಿಗಳು, ಹೋಟೆಲ್ಗಳು, ಮೆಟ್ರೊ, ವಿಮಾನ, ಬಸ್ ಸೇವೆ ಇರಲಿದೆ. ಆದರೆ ನಿಗಮಗಳ ನೌಕರರ ಸಂಘಗಳು ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆ ಈ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಸರ್ಕಾರ ತಿಳಿಸಿದೆ.