ಬೆಂಗಳೂರು, ಸೆ 27(DaijiworldNews/PY): ವಿಧಾನ ಪರಿಷತ್ತಿನಲ್ಲಿ ಮಧ್ಯರಾತ್ರಿ 12.40 ರವರೆಗೆ ಚರ್ಚೆಗೆ ಧಾರಾಳವಾಗಿ ಅವಕಾಶ ಮಾಡಿಕೊಟ್ಟು ವಿಧೇಯಕವನ್ನು ಮತಕ್ಕೆ ಹಾಕದೆ ರಾಷ್ಟ್ರಗೀತೆ ಯ ಮೂಲಕ ದಿಢೀರನೆ ಸದನವನ್ನು ಅನಿರ್ದಿಷ್ಟ ಕಾಲ ಮುಂದೂಡಿದ ಸಭಾಪತಿಗಳ ನಡೆ ನಿಗೂಢವೆಂದೇ ಹೇಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ವಿಧಾನ ಪರಿಷತ್ತಿನಲ್ಲಿ ಮಧ್ಯರಾತ್ರಿ 12.40 ರವರೆಗೆ ಚರ್ಚೆಗೆ ಧಾರಾಳವಾಗಿ ಅವಕಾಶ ಮಾಡಿಕೊಟ್ಟು ವಿಧೇಯಕವನ್ನು ಮತಕ್ಕೆ ಹಾಕದೆ ರಾಷ್ಟ್ರಗೀತೆ ಯ ಮೂಲಕ ದಿಢೀರನೆ ಸದನವನ್ನು ಅನಿರ್ದಿಷ್ಟ ಕಾಲ ಮುಂದೂಡಿದ ಸಭಾಪತಿಗಳ ನಡೆ ನಿಗೂಢವೆಂದೇ ಹೇಳಬೇಕು. ಇದೀಗ ಬೇಸರದಿಂದಲೇ ಮನೆ ಕಡೆ ಹೊರಟಿದ್ದೇನೆ. ಅಂಪೈರ್ ಎಂದೂ ಹೀಗಿರಬಾರದು ಎಂದಿದ್ದಾರೆ.
ನಿನ್ನೆ ವಿಧಾನ ಪರಿಷತ್ನಲ್ಲಿ, ತಿದ್ದುಪಡಿ ಮಸೂದೆಗಳು, ವಿಧೇಯಕಗಳ ಬಗ್ಗೆ ಚರ್ಚೆ ನಡೆದಿದ್ದು, ಈ ವೇಳೆ ಆಡಳಿತ ಹಾಗೂ ವಿರೋಧ ಪಕ್ಷಗಳ ಮಧ್ಯೆ ಒಮ್ಮತ ಮೂಡದೇ ಇದ್ದ ಸಂದರ್ಭ ಕಲಾಪವನ್ನು ಸ್ವಲ್ಪ ಹೊತ್ತು ಮುಂದೂಡಲಾಗಿತ್ತು. ಹಾಗಿದ್ದರೂ ಕೂಡಾ ತಡರಾತ್ರಿ 12.40ರ ತನಕವೂ ಪರಿಷತ್ ಸಭಾಪತಿ ಚರ್ಚೆಗೆ ಕಾಲಾವಕಾಶ ಮಾಡಿಕೊಟ್ಟಿದ್ದರು.
ಮೇಲ್ಮನೆಯಲ್ಲಿ ಮಾತಿನ ಚಕಮಕಿ, ಗಲಾಟೆಯಿಂದಾಗಿ ಮತ್ತೆ ಕಲಾಪ ಮುಂದೂಡಲಾಗಿತ್ತು. ಸಭಾಪತಿ ಪೀಠದಲ್ಲಿ ಕೆ.ಸಿ.ಕೊಂಡಯ್ಯ ಅವರು ಮನವಿ ಮಾಡಿದರೂ ಕೂಡಾ ಪರಸ್ಪರ ವಾಗ್ದಾಳಿ ನಿಲ್ಲಿಸಲಿಲ್ಲ. ಈ ವೇಳೆ ಕಲಾಪ ಮುಂದೂಡಿದರೂ ಕೂಡಾ ಆಡಳಿತ ಪಕ್ಷದವರಿಂದ ದಲಿತ ವಿರೋಧಿ ಕಾಂಗ್ರೆಸ್ ಎಂದು ಧಿಕ್ಕಾರ ಮೊಳಗಿಸಿದರು. ಡಿಜೆ ಹಳ್ಳಿ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಚರ್ಚೆ ನಡೆಸಿದ್ದು, ಸುಮಾರು 12.40ರವರೆಗೆ ಚರ್ಚೆ ಮುಂದುವರೆದಿತ್ತು. ಬಳಿಕ ರಾಷ್ಟ್ರಗೀತೆ ಮೂಲಕ ಸದನ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು.