ದೆಹಲಿ, ಸೆ. 27 (DaijiworldNews/HR): ದೆಹಲಿ ಗಲಭೆಗೆ ಹಣ ಪೂರೈಸಲು ತನ್ನ ಸ್ವಂತದ 1.5 ಕೋಟಿ ಹಣವನ್ನು ಕಪ್ಪು ಹಣವಾಗಿ ಎಎಪಿಯಿಂದ ಅಮಾನತುಗೊಂಡಿರುವ ಕೌನ್ಸಿಲರ್ ತಾಹಿರ್ ಹುಸೇನ್ ಪರಿವರ್ತಿಸಿದ್ದಾರೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ (ಚಾರ್ಜ್ಶೀಟ್ನಲ್ಲಿ) ಉಲ್ಲೇಖಿಸಲಾಗಿದೆ.
ಫೆಬ್ರವರಿಯಲ್ಲಿ ಸಿಎಎ ವಿರುದ್ಧ ದೆಹಲಿಯಲ್ಲಿ ನಡೆದಿದ್ದ ಪ್ರತಿಭಟನೆಯು ಗಲಭೆ ಸ್ವರೂಪ ಪಡೆದುಕೊಂಡಿತ್ತು. ಇದರಲ್ಲಿ 53 ಮಂದಿ ಮೃತಪಟ್ಟಿದ್ದರು.
ಇನ್ನು ತಾಹಿರ್ ಹುಸೇನ್, ದೆಹಲಿ ಘರ್ಷಣೆಯ ಪ್ರಮುಖ ಸಂಚುಕೋರರಾದ ಉಮರ್ ಖಾಲಿದ್ ಅವರಂಥವರಿಂದ ಪ್ರಭಾವಿತನಾಗಿದ್ದ ಎಂದೂ ಸೆ.16ರಂದು ಸಲ್ಲಿಸಲಾಗಿರುವ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಈಗಾಗಲೇ ಎಎಪಿಯಿಂದ ಅಮಾನತುಗೊಂಡಿರುವ ತಾಹಿರ್ ಹುಸೇನ್ ಗಲಭೆಯ ಸಂದರ್ಭದಲ್ಲಿ ಗುಪ್ತಚರ ದಳದ ಸಿಬ್ಬಂದಿ ಅಂಕಿತ್ ಶರ್ಮಾ ಅವರ ಹತ್ಯೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾನೆ. ಇದಲ್ಲದೇ, ದೆಹಲಿ ಗಲಭೆಗಾಗಿ ಪಿತೂರಿ ನಡೆಸಿದ್ದಾರೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿರುವ 15 ಜನರ ಪಟ್ಟಿಯಲ್ಲಿ ತಾಹಿರ್ ಹುಸೇನ್ ಹೆಸರನ್ನೂ ಸೇರಿಸಲಾಗಿದೆ.