ಲಕ್ನೋ, ಸೆ. 27 (DaijiworldNews/HR): 20 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ನಾಲ್ವರು, ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಪಶ್ಚಿಮ ಉತ್ತರ ಪ್ರದೇಶದ ಹತರಾಸ್ ಎಂಬಲ್ಲಿ ನಡೆದಿದೆ.
ಯುವತಿ ಸರಕಾರಿ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಮೇಲ್ವರ್ಗಕ್ಕೆ ಸೇರಿದವರೆಂದು ತಿಳಿದು ಬಂದಿದೆ.
ಈ ಕುರಿತು ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾಹಿತಿ ನೀಡಿದ್ದು, ಸಂತ್ರಸ್ತೆ ಯುವತಿಗೆ ಹಲವು ಮುರಿತದ ಗಾಯಗಳಾಗಿದ್ದು, ನಾಲಗೆ ಕತ್ತರಿಸಲಾಗಿದೆ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಿಲ್ಲಿಯ ಸುಸಜ್ಜಿತ ಆಸ್ಪತ್ರೆಗೆ ವರ್ಗಾಯಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ.
ಇನ್ನು ಆರೋಪಿಗಳನ್ನು ಬಂಧಿಸಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ.