ಬೆಂಗಳೂರು, ಸೆ. 27 (DaijiworldNews/MB) : ನಾನೆಂದಿಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಮೊದಲ ಆಯ್ಕೆ ಪಕ್ಷ ಸಂಘಟನೆ. ಪಕ್ಷ ಯಾವಾಗ ಸೂಚನೆ ನೀಡುತ್ತದೋ ಅಂದು ನಾನು ಸಚಿವ ಸ್ಥಾನವನ್ನು ತ್ಯಜಿಸಲು ಸಿದ್ದನಿದ್ದೇನೆ ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಹೇಳಿದರು.
ಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ ನಾನು ಯಾವುದೇ ಆಸೆ, ನಿರೀಕ್ಷೆಯಿಂದ ಪಕ್ಷದಲ್ಲಿ ಕಾರ್ಯ ನಿರ್ವಹಿಸಿಲ್ಲ. ನನ್ನದು ಪಕ್ಷ ನಿಷ್ಠೆ, ಪರಿಶ್ರಮದ ಸೂತ್ರ. ಎಂದಿಗೂ ಪಕ್ಷದ ಮೇಲೆ ನಿಷ್ಠೆಯಿಂದಿದ್ದೇನೆ. ಪಕ್ಷ ಯಾವ ಸ್ಥಾನ ನೀಡಿದರೂ ನಿಭಾಯಿಸುತ್ತೇನೆ. ಒಂದು ವೇಳೆ ಪಕ್ಷ ಸಚಿವ ಸ್ಥಾನ ತ್ಯಜಿಸುವಂತೆ ಸೂಚಿಸಿದರೂ ನಾನು ಸಚಿವ ಸ್ಥಾನದಿಂದ ಕೆಳಗಿಳಿಯುತ್ತೇನೆ ಎಂದು ಹೇಳಿದರು.
ಈ ಹಿಂದೆ ಅನಂತ್ ಕುಮಾರ್ ಇಂತಹ ಹುದ್ದೆಯಲ್ಲಿದ್ದರು. ನಾನು ಅವರಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ, ಆದರೆ ನಾನು ಪ್ರಯತ್ನಿಸುತ್ತೇನೆ. ನಾನು ಮಾತೃ ಸ್ಥಾನದಲ್ಲೇ ಇರುವವನು, ರಾಜ್ಯ ಮಟ್ಟದಲ್ಲೇ ಇರುತ್ತೇನೆಯೇ ಹೊರತು ದೆಹಲಿ ಮಟ್ಟದಲ್ಲಿ ರಾಜಕಾರಣ ಮಾಡುವುದಿಲ್ಲ. ಏನೇ ಆದರೂ ನನ್ನ ಮೊದಲ ಆಯ್ಕೆ ಪಕ್ಷ ಸಂಘಟನೆ. ನಮ್ಮ ಪಕ್ಷದಲ್ಲಿ ಮಾತ್ರ ಈ ಅವಕಾಶಗಳು ಲಭಿಸುತ್ತದೆ ಎಂದು ಬಿಜೆಪಿ ಪಕ್ಷವನ್ನು ಹೊಗಳಿದರು.
ಇನ್ನು ಈ ಸಂದರ್ಭದಲ್ಲೇ ರೈತ ಮಸೂದೆಗಳ ವಿರುದ್ದ ರೈತರು ಮಾಡುತ್ತಿರುವ ಬಂದ್ ಬಗ್ಗೆ ಮಾತನಾಡಿದ ಅವರು, ಈ ಮಸೂದೆಯಿಂದಾಗಿ ರೈತರ ಮನೆ ಬಾಗಿಲಿಗೆ ವ್ಯಾಪಾರಿಗಳು ಬರುತ್ತಾರೆ. ಇದರಿಂದಾಗಿ ರೈತರಿಗೆ ನ್ಯಾಯಯುತವಾದ ಬೆಲೆ ದೊರೆಯುತ್ತದೆ. ನಾವು ಬೆಳೆದ ಬೆಲೆಗೆ ನಾವೇ ಬೆಲೆ ನಿಗದಿ ಮಾಡುವಂತಹ ರೈತ ಪರವಾದ ಕಾಲ ಬರುತ್ತದೆ. ರೈತರು ಎಂದಿಗೂ ಕಾಂಗ್ರೆಸ್ನ ರಾಜಕೀಯ ಪ್ರಚೋದನೆಗೆ ಬಲಿಯಾಗಬೇಡಿ ಎಂದು ಹೇಳಿದ ಅವರು ಕಾಂಗ್ರೆಸ್ ಕೂಡಾ ಪ್ರಣಾಳಿಕೆಯಲ್ಲಿ ಇದನ್ನು ಹೇಳಿದ್ದು ಮತ್ಯಾಕೆ ಈಗ ವಿರೋಧ ಎಂದು ಪ್ರಶ್ನಿಸಿದರು.