ಬೆಂಗಳೂರು, ಸೆ. 27 (DaijiworldNews/MB) : ಕೃಷಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಸೋಮವಾರದ ಬಂದ್ಗೆ ರಾಜ್ಯ ಸರ್ಕಾರ ಯಾವುದೇ ಬೆಂಬಲ ಸೂಚಿಸಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ಭಾನುವಾರ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, ''ರೈತ ಪರವಾಗಿ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರೈತರ ಹಿತದೃಷ್ಟಿಯಿಂದ ಈ ಮಸೂದೆಗಳ ತಿದ್ದುಪಡಿ ಮಾಡಿದೆ. ರೈತರು ಬೆಳೆಯುವ ಬೆಳೆಗೆ ಉತ್ತಮ ಬೆಲೆ ಪಡೆಯುವಂತಾಗಲಿ ಎಂಬ ಉದ್ದೇಶದಿಂದ ಕೃಷಿ ಉತ್ಪನ್ನ ಮಾರುಟ್ಟೆ ವ್ಯವಹಾರ ನಿಯಂತ್ರಣ (ಎಪಿಎಂಸಿ) ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಇವೆಲ್ಲವೂ ರೈತ ಮುಖಂಡರಿಕೆ ತಿಳಿಸಲಾಗಿದೆ. ನಾವು ಈ ಬಂದ್ಗೆ ಬೆಂಬಲ ನೀಡಲ್ಲ'' ಎಂದು ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ಕಂದಾಯ ಸಚಿವ ಆರ್. ಅಶೋಕ ಮಾತನಾಡಿ, ''ಸರ್ಕಾರ ಈ ಬಂದ್ಗೆ ಬೆಂಬಲ ನೀಡುವುದಿಲ್ಲ. ಸೋಮವಾರ ಎಂದಿನಂತೆ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ಅಂಗಡಿ ಮುಂಗಟ್ಟುಗಳು ತೆರೆದಿರುತ್ತದೆ. ಎಲ್ಲ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಇರುತ್ತದೆ. ಸಾರ್ವಜನಿಕರು ಯಾವ ಭಯಪಡ ಬೇಕಾಗಿಲ್ಲ. ಯಾರಾದರೂ ಬಲವಂತವಾಗಿ ಬಂದ್ ಮಾಡಲು ಯತ್ನ ಮಾಡಿದರೆ ಅವರ ವಿರುದ್ದ ಕಠಿಣ ಕ್ರಮವನ್ನು ಪೊಲೀಸರು ಕೈಗೊಳ್ಳುತ್ತಾರೆ. ನಾವು ಬಂದ್ ವಿಚಾರದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳು ನೀಡಿರುವ ನಿರ್ದೇಶನಗಳ ಪಾಲನೆ ಮಾಡುತ್ತೇವೆ'' ಎಂದು ಎಚ್ಚರಿಕೆ ನೀಡಿದ್ದಾರೆ.