ಲಡಾಖ್, ಸೆ. 27 (DaijiworldNews/HR): ಚೀನಾದೊಂದಿಗೆ ಕಳೆದ ಕೆಲವು ತಿಂಗಳಿಂದ ಸಂಘರ್ಷದಲ್ಲಿ ತೊಡಗಿರುವ ಭಾರತೀಯ ಸೇನೆಯ ಶಸ್ತ್ರಸಜ್ಜಿತ ರಕ್ಷಣಾ ಪಡೆಗಳು ಪೂರ್ವ ಲಡಾಕ್ನ ವಾಸ್ತವ ಗಡಿ ರೇಖೆಯ 14,500 ಅಡಿಗಳಿಗಿಂತಲೂ ಹೆಚ್ಚು ಎತ್ತರದ ಪ್ರದೇಶದಲ್ಲಿ ಟ್ಯಾಂಕರ್ಗಳನ್ನು ನಿಯೋಜಿಸಿದ್ದು, ಆ ಮೂಲಕ ಚೀನಾದಿಂದ ಯಾವುದೇ ಸಂದರ್ಭದಲ್ಲಿ ಎದುರಾಗಬಹುದಾದ ಬೆದರಿಕೆಯನ್ನು ಹಿಮ್ಮೆಟ್ಟಿಸಲು ಸಿದ್ದತೆ ನಡೆಸಿದೆ.
ಭಾರತೀಯ ಸೈನ್ಯವು ಸೈನಿಕರಿಗೆ ಗಡಿಯ ಗುಂಟಾ ಹೊಸ ಆಶ್ರಯ ಮತ್ತು ಪೂರ್ವನಿರ್ಮಿತ ರಚನೆಗಳನ್ನು ನಿರ್ಮಿಸುತ್ತಿದ್ದು, ಈ ಮೂಲಕ ಅತ್ಯಂತ ಕಠಿಣ ಚಳಿಗಾಲದಲ್ಲೂ ಹೋರಾಡುವ ವ್ಯವಸ್ಥೆಗೆ ಕೆಲಸ ಮಾಡುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ್ ಸೇನೆ, ಪೂರ್ವ ಲಡಾಕ್ನ ವಾಸ್ತವ ಗಡಿ ನಿಯಂತ್ರಣಾ ರೇಖೆಯ ಚುಮಾರ್-ಡೆಮ್ಚೋಕ್ನ ಎತ್ತರದ ಪ್ರದೇಶದಲ್ಲಿ ಟಿ -90 ಮತ್ತು ಟಿ -72 ಟ್ಯಾಂಕ್ಗಳು ಮತ್ತು ಬಿಎಂಪಿ -2 ಕಾಲಾಳುಪಡೆಯ ವಾಹನಗಳನ್ನು ನಿಯೋಜಿಸಲಾಗಿದೆ. ಇವು -40 ಡಿಗ್ರಿ ಕನಿಷ್ಠ ತಾಪಮಾನದಲ್ಲೂ ಕಾರ್ಯನಿರ್ವಹಿಸಬಲ್ಲವು. ಕಠಿಣ ಚಳಿಗಾಲದಲ್ಲೂ ಯುದ್ಧ ಟ್ಯಾಂಕರ್ಗಳನ್ನು ಬಳಸಲು ಸೇನೆಯು ಅವುಗಳಿಗೆ 3 ರೀತಿಯ ವಿವಿಧ ಇಂಧನಗಳನ್ನು ಬಳಸುತ್ತದೆ ಎಂದು ತಿಳಿಸಿದೆ.
ಇನ್ನು ಸಿಬ್ಬಂದಿ ಮತ್ತು ಸಲಕರಣೆಗಳ ಸನ್ನದ್ಧು ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮೇಜರ್ ಜನರಲ್ ಅರವಿಂದ ಕಪೂರ್ ತಿಳಿಸಿದ್ದಾರೆ.