ಪಾಟ್ನಾ, ಸೆ. 27 (DaijiworldNews/HR): ಡಿಜಿಪಿ ಪದವಿಗೆ ರಾಜೀನಾಮೆ ನೀಡಿದ್ದ ಗುಪ್ತೇಶ್ವರ್ ಪಾಂಡೆ ರಾಜಕೀಯ ಪ್ರವೇಶಿಸುವುದು ಖಚಿತವಾಗಿದ್ದು, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕೆ ಇಂದು ಸೇರ್ಪಡೆಯಾಗಲಿದ್ದಾರೆ.
ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾದ ಬಳಿಕ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಡಿಜಿಪಿ ಸ್ಥಾನಕ್ಕೆ ಗುಪ್ತೇಶ್ವರ್ ಕಳೆದ ವಾರವಷ್ಟೇ ರಾಜೀನಾಮೆ ನೀಡಿ, ಸ್ವಯಂಪ್ರೇರಿತ ನಿವೃತ್ತಿ ಪಡೆದು, ತಾನು ರಾಜಕೀಯ ಸೇರುವುದಾಗಿ ಇಚ್ಚೆ ವ್ಯಕ್ತಪಡಿಸಿದ್ದರು.
ಶನಿವಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಪಾಂಡೆ, ಡಿಜೆಪಿಯಾಗಿ ಕೆಲಸ ನಿರ್ವಹಿಸಲು ಸ್ವತಂತ್ರ ನೀಡಿದ್ದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ತಿಳಿಸಲು ಬಂದಿದ್ದೇನೆ. ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ತೀರ್ಮಾನಿಸಿಲ್ಲ ಎಂದಿದ್ದರು.
ಇನ್ನು ಬಿಹಾರ ವಿಧಾನಸಭೆ ಚುನಾವಣೆಯು ಮೂರು ಹಂತದಲ್ಲಿ ನಡೆಯಲಿದ್ದು, ಅಕ್ಟೋಬರ್ 28ರಂದು ಮೊದಲ ಹಂತ, ನವೆಂಬರ್ 3ರಂದು ಎರಡನೇ ಹಂತ ಮತ್ತು ನವೆಂಬರ್ 7ರಂದು ಮೂರನೇ ಹಂತದ ಮತದಾನ ನಡೆಯಲಿದೆ.