ತಮಿಳುನಾಡು, ಸೆ 27(DaijiworldNews/PY): ಇನಾಮ್ಕೂಲತ್ತೂರ್ನ ಸಮತಯವಾಪುರಂ ಕಾಲೋನಿಯಲ್ಲಿರುವ ಸಮಾಜ ಸುಧಾರಕ ಇ.ವಿ. ರಾಮಸ್ವಾಮಿ ಪೆರಿಯಾರ್ ಅವರ ಪ್ರತಿಮೆಗೆ ದುಷ್ಕರ್ಮಿಗಳು ಭಾನುವಾರ ಕೇಸರಿ ಬಣ್ಣ ಬಳಿದಿದ್ದು, ತಮಿಳುನಾಡಿನ ರಾಜಕೀಯ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಪ್ರತಿಮೆಯ ಬಳಿ ಚಪ್ಪಲಿಯೊಂದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡು ಉಪಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಅವರು ಈ ಕೃತ್ಯವನ್ನು ಖಂಡಿಸಿದ್ದು, ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುದಾಗಿ ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಡಿಎಂಕೆ ಪಕ್ಷ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಕೂಡಾ ಇದೇ ರೀತಿಯಾದ ಕೃತ್ಯ ನಡೆದಿದ್ದು, ಇದು ರಾಜ್ಯದಲ್ಲಿ ಎರಡನೇ ಪ್ರಕರಣವಾಗಿದೆ.
ಘಟನೆಯ ಬಗ್ಗೆ ಆಕ್ರೋಶಗೊಂಡಿರುವ ಸ್ಥಳೀಯರು ಏಕಾಏಕಿ ಪ್ರತಿಭಟನೆ ನಡೆಸಿದ್ದು, ದಿಂಡಿಗಲ್ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಪೆರಿಯಾರ್ ಅವರು ತಮಿಳರಿಗೆ ನಾಯಕರು. ಇಂತಹ ವ್ಯಕ್ತಿಯ ಪ್ರತಿಮೆಯನ್ನು ವಿರೂಪಗೊಳಿಸುವ ವ್ಯಕ್ತಿಯನ್ನು ಗಡಿಪಾರು ಮಾಡಬೇಕು ಎಂದು ಸ್ಟಾಲಿನ್ ಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.