ಬೆಂಗಳೂರು, ಸೆ. 27 (DaijiworldNews/MB) : ಕಾಂಗ್ರೆಸ್ ಪಕ್ಷ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಹೊತ್ತಿರುವ ರಣದೀಪ್ ಸುರ್ಜೆವಾಲ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು, ನಮ್ಮದು ರಾಷ್ಟ್ರೀಯ ಪಕ್ಷವಾದ್ದರಿಂದ ಕೇವಲ ರಾಜ್ಯದಲ್ಲಿ ಮಾತ್ರವಲ್ಲ ಇಡೀ ರಾಷ್ಟ್ರದಲ್ಲೇ ನಡೆಯುವ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ಹಾಗೆಯೇ 'ಶನಿವಾರ ಸದನದಲ್ಲಿ ಸವಾಲು ಪ್ರತಿ ಸವಾಲುಗಳು ನೋಡಿದ್ದೇವೆ. ಮುಂದಿನ ನಡೆ ಬಗ್ಗೆ ಎಲ್ಲರೂ ಕೂತು ಚರ್ಚೆ ನಡೆಸುತ್ತೇವೆ' ಎಂದು ಡಿಕೆಶಿ ಹೇಳಿದರು.
ಕೃಷಿ ಮಸೂದೆಗಳನ್ನು ವಿರೋಧಿಸಿ ಸೋಮವಾರ ರೈತರ ಕರ್ನಾಟಕ ಬಂದ್ಗೆ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ತನ್ನ ಬೆಂಬಲ ಸೂಚಿಸಿದೆ. ಇದಕ್ಕೂ ಮುನ್ನ ಭಾನುವಾರ ಬೆಳಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡ ಕರ್ನಾಟಕ ಬಂದ್ಗೆ ತಮ್ಮ ಬೆಂಬಲ ಸೂಚಿಸಿ ರೈತ ಹೋರಾಟದ ಪರ ಇರುವುದಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದರು.