ಮುಂಬೈ, ಸೆ. 27 (DaijiworldNews/MB) : ನಾವು ಸಂದರ್ಶನದ ಬಗ್ಗೆ ಚರ್ಚಿಸಲು ಭೇಟಿಯಾದೆವು, ಬೇರೇನೂ ಇಲ್ಲ ಎಂದು ಮಹಾರಾಷ್ಟ್ರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಆಡಳಿತಾರೂಢ ಶಿವಸೇನಾ ಮುಖ್ಯ ವಕ್ತಾರ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಪ್ತ ಸಂಜಯ್ ರಾವತ್ ಹಾಗೂ ತನ್ನ ಭೇಟಿಯ ಬಗ್ಗೆ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ಹೇಳಿದ್ದಾರೆ.
ಮುಂಬೈನ ಪಂಚತಾರ ಹೋಟೆಲ್ನಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಶಿವಸೇನೆಯ ಮುಖ್ಯ ವಕ್ತಾರ ಸಂಜಯ್ ರಾವತ್ ಅವರು ಶನಿವಾರ ಭೇಟಿಯಾಗಿದ್ದು, ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವಿಚಾರ ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.
ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ, ಬಿಜೆಪಿಯ ಪ್ರವೀಣ್ ದಾರೆಕರ್ ಅವರು, ಸಾಮ್ನ ಜೊತೆಗಿನ ನಿಗದಿತ ಸಂದರ್ಶನವೊಂದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಇಬ್ಬರೂ ನಾಯಕರು ಭೇಟಿಯಾಗಿದ್ದರು ಎಂದು ತಿಳಿಸಿದ್ದರು.
ಇದೀಗ ಈ ಬಗ್ಗೆ ಫಡ್ನವೀಸ್ ಅವರೇ ಸ್ಪಷ್ಟನೆ ನೀಡಿದ್ದು, ನನ್ನ ಸಂದರ್ಶನವನ್ನು ರಾವತ್ ಅವರು ಕೇಳಿದ್ದರು. ಆದರೆ, ಪೂರ್ಣ ಪ್ರಮಾಣದ ಸಂದರ್ಶನವನ್ನು ಪ್ರಕಟಿಸಬೇಕು. ನನ್ನದೇ ಕ್ಯಾಮರಾ ಬಳಸಲು ಅನುಮತಿ ನೀಡಬೇಕು ಎಂಬ ವಿಚಾರಗಳ ಬಗ್ಗೆ ಭೇಟಿಯಾಗಿ ಚರ್ಚಿಸಿದೆವು ಎಂದು ತಿಳಿಸಿದ್ದಾರೆ.
ಹಾಗೆಯೇ ಈ ಸಂದರ್ಭದಲ್ಲೇ, ಬಿಜೆಪಿಗೆ ಶಿವಸೇನಾ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಪತನಗೊಳಿಸುವ ಆಸಕ್ತಿ ಇಲ್ಲ. ರಾಜ್ಯದ ಜನರಿಗೆ ಸರ್ಕಾರದ ಮೇಲೆ ಅಸಮಧಾವನವಿದ್ದು ಆ ಸರ್ಕಾರ ತಾನಾಗಿಯೇ ಪತನವಾಗುತ್ತದೆ ಎಂದು ಹೇಳಿದರು.
ಇನ್ನು ಫಡ್ನವೀಸ್ ಹಾಗೂ ತನ್ನ ಭೇಟಿಯ ಬಗ್ಗೆ ಮಾತನಾಡಿರುವ ಸಂಜಯ್ ರಾವತ್ ಅವರು, ಫಡ್ನವೀಸ್ ಅವರು ನಮ್ಮ ಶತ್ರುವಲ್ಲ. ರಾಜಕೀಯ ಪ್ರತಿಸ್ಪರ್ಧಿಗಳು ಎಂದ ಮಾತ್ರಕ್ಕೆ ಅವರು ಶತ್ರುಗಳಾಗುವುದಿಲ್ಲ. ನಾವು ಅವರೊಂದಿಗೆ ಕಾರ್ಯ ನಿರ್ವಹಿಸಿದ್ದೇವೆ. ಸಂದರ್ಶನದ ಬಗ್ಗೆ ಮಾತನಾಡುವುದಕ್ಕಾಗಿ ಅವರನ್ನು ಭೇಟಿಯಾಗಿದ್ದೇನೆ ಎಂದು ಹೇಳಿದ್ದಾರೆ.