ಬೆಂಗಳೂರು,ಸೆ. 27 (DaijiworldNews/MB) : 2025 ರ ವೇಳೆಗೆ 5,000 ಕೋಟಿ ರೂ.ಗಳ ಹೂಡಿಕೆ ಮತ್ತು 10,000 ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು ಕರ್ನಾಟಕದ ಹೊಸ ಪ್ರವಾಸೋದ್ಯಮ ನೀತಿಯ ಮಹತ್ವಾಕಾಂಕ್ಷೆಯ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭಾನುವಾರ ಹೇಳಿದರು.
ವಿಧಾನಸೌಧದ ಸಭಾಗೃಹದಲ್ಲಿ 2000-25ರ ನೀತಿಯನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ, ರಾಜ್ಯ ಸರ್ಕಾರವು ಪ್ರಸ್ತುತ ರಾಜ್ಯ ದೇಶೀಯ ಉತ್ಪನ್ನದ (ಜಿಎಸ್ಡಿಪಿ) ದರವನ್ನು 14.8% ರಿಂದ 2025 ರ ವೇಳೆಗೆ 20% ಕ್ಕೆ ಏರಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಹಾಗೂ ಕರ್ನಾಟಕವು ದೇಶೀಯ ಮತ್ತು ಪ್ರಮುಖ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸಲು '360 ಡಿಗ್ರಿ ಮಾರ್ಕೆಟಿಂಗ್ ಸ್ಟಾಟರ್ಜಿಯನ್ನು ಅಳವಡಿಸಿಕೊಳ್ಳಲಿದೆ ಎಂದು ಕೂಡಾ ತಿಳಿಸಿದ್ದಾರೆ.
ಕೃಷಿ-ಪ್ರವಾಸೋದ್ಯಮ ಮತ್ತು ಗ್ರಾಮೀಣ-ಪ್ರವಾಸೋದ್ಯಮ ಹಾಗೆಯೇ ಐತಿಹಾಸಿಕ ಸ್ಥಳಗಳ-ಪ್ರವಾಸೋದ್ಯಮಗಳನ್ನು ಪ್ರಮುಖ ಪ್ರವಾಸೋದ್ಯಮ ವಿಷಯಗಳಾಗಿ ಪ್ರಚಾರ ಮಾಡುವುದರ ಜೊತೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಲಂಬಾನಿ ಮತ್ತು ಇತರ ಆದಿವಾಸಿ ಸಮುದಾಯಗಳ ವಿಶಿಷ್ಟ ಸಂಸ್ಕೃತಿಯನ್ನು ಉತ್ತೇಜಿಸಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಅಟ್ರೇಕ್ಷನ್ (ಆಕರ್ಷಣೆ), ಅಕಾಮೆಂಡೇಷನ್ (ವಸತಿ), ಆಕ್ಸೆಸೆಬಿಲಿಟಿ (ಪ್ರವೇಶ), ಅಮೇನಿಟಿಸ್ (ಸೌಲಭ್ಯಗಳು) ಹಾಗೂ ಆಕ್ಟಿವಿಟೀಸ್ (ಚಟುವಟಿಕೆಗಳ) ಐದು ಎ ಗಳ ಮೇಲೆ ಹೆಚ್ಚಿನ ಆದ್ಯತೆ ನೀಡಿ ಪ್ರವಾಸೋದ್ಯಮ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಅವರು, "ಕರ್ನಾಟಕವು ಅದ್ಭುತವಾದ ಸಂಪ್ರದಾಯ, ಶ್ರೀಮಂತ ಸಂಸ್ಕೃತಿ ಮತ್ತು ಕಲಾತ್ಮಕ ಶ್ರೇಷ್ಠತೆಯ ನೆಲವಾಗಿದೆ. ಪ್ರವಾಸೋದ್ಯಮ ನೀತಿಯ ಮುಖ್ಯ ಗುರಿ ಈ ಸುಂದರವಾದ ಭೂಮಿಗೆ ಭೇಟಿ ನೀಡುವ ಪ್ರತಿಯೊಬ್ಬರು ತೃಪ್ತಿಕರ ಅನುಭವ ಹೊಂದುವಂತೆ ನೋಡಿಕೊಳ್ಳುವುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್ಟಿಡಿಸಿ) ಅಧ್ಯಕ್ಷೆ ಶ್ರುತಿ ಮತ್ತು ಎಂ.ಎಲ್.ಸಿ ವೈ ಎ ನಾರಾಯಣಸ್ವಾಮಿ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮೊದಲು ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಯುವಕರ ಬೈಕ್ ರ್ಯಾಲಿಯನ್ನು ಮುಖ್ಯಮಂತ್ರಿ ಉದ್ಘಾಟಿಸಿದರು.
ಬಳಿಕ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಸಚಿವ ಸಿ ಟಿ ರವಿ ಅವರನ್ನು ಮುಖ್ಯಮಂತ್ರಿ ಬಿಎಸ್ವೈ ಅವರು ಸನ್ಮಾನಿಸಿದರು.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೊದಲಾದವರು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾದರು.