ಬೆಂಗಳೂರು, ಸೆ. 27 (DaijiworldNews/MB) : ಸರ್ಕಾರ ಜಾರಿಗೆ ಮುಂದಾಗಿರುವ ಕೃಷಿ ಮಸೂದೆ ವಿರುದ್ದ ರಾಜ್ಯದಲ್ಲಿ ಬೀದಿಗಿಳಿದಿರುವ ರೈತ ಪರ ಸಂಘಟನೆಗಳು ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ಗೆ ಕರೆ ನೀಡಿದ್ದು ಬಂದ್ಗೆ ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ, ಸಿಪಿಐ ಸೇರಿದಂತೆ ಹಲವಾರು ಪಕ್ಷಗಳು ಹಾಗೂ ಸಂಘಟನೆಗಳು ಬೆಂಬಲ ಸೂಚಿಸಿದ್ದು ನಾಳೆ ರಾಜ್ಯದಲ್ಲಿ ಬಂದ್ ಯಶಸ್ವಿಯಾಗುವ ಸಾಧ್ಯತೆಯಿದೆ.
ರಾಜ್ಯದ 2 ರೈತ ಸಂಘಗಳಾದ ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರೈತ ಕೃಷಿ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಆಶಾ ಜನಶಕ್ತಿ ಸಂಘ ಸೇರಿದಂತೆ 9 ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿದ್ದು ಕನ್ನಡಪರ ಸಂಘಟನೆಗಳು ಕೂಡಾ ಬೆಂಬಲ ನೀಡಿದೆ. ಹಲವು ಜಿಲ್ಲೆಗಳಲ್ಲಿ ಸಂಚಾರವೂ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ. ಪೆಟ್ರೋಲ್- ಡಿಸೇಲ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘದಿಂದ, ಬಾರ್ ಮಾಲೀಕರ ಅಸೋಸಿಯೇಷನ್, ಖಾಸಗಿ ಬಸ್ಗಳ ಒಕ್ಕೂಟದಿಂದ, ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಸಂಘ, ಮಾಲ್ ಅಸೋಸಿಯೇಷನ್ನ್ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿವೆ.
ರೈತ ಸಂಘ, ಹಸಿರು ಸೇನೆ, ದಲಿತ ಸಂಘಟನೆಗಳು, ಓಲಾ-ಉಬರ್ ಚಾಲಕರ ಸಂಘಗಳು, ಸಿಐಟಿಯು, ಬೀದಿ ಬದಿ ವ್ಯಾಪಾರಿಗಳು ಈ ಕನ್ನಡಪರ ಸಂಘಟನೆಗಳು ಕೂಡಾ ಬೆಂಬಲ ನೀಡಿದೆ. ಹಾಗಾಗಿ ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆವರೆಗೂ ಕರ್ನಾಟಕ ಸಂಪೂರ್ಣ ಬಂದ್ ಆಗಲಿದೆ ಅಂತಾ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ನಾಳೆ ಓಲಾ-ಉಬರ್ ಸೇವೆಯಲ್ಲಿ ವ್ಯತ್ಯಯವಾಗಬಹುದು. ಆಟೋ-ಟ್ಯಾಕ್ಸಿಗಳು ಸಹ ಸಂಚಾರ ನಿಲ್ಲಿಸುವ ಸಾಧ್ಯತೆಯಿದೆ. ಹಾಗೆಯೇ ಕೆಲವೆಡೆ ಖಾಸಗಿ ಬಸ್ಗಳು ಕೂಡಾ ಸಂಚಾರ ಸ್ಥಗಿತಗೊಳಿಸುವ ಸಾಧ್ಯತೆಯಿದೆ.
ಇನ್ನು ನಾಳೆ ಹಾಲು, ಪೇಪರ್, ಹಣ್ಣು, ತರಕಾರಿ ಲಭ್ಯತೆಯಲ್ಲಿ ಯಾವ ವ್ಯತ್ಯಯವೂ ಆಗುವುದಿಲ್ಲ. ಆಸ್ಪತ್ರೆ, ಮೆಡಿಕಲ್ ಸೇವೆಗಳು ಎಂದಿನಂತೆ ಇರಲಿದೆ. ಬಿಎಂಟಿಸಿ, ಕೆಎಸ್ಆರ್ಟಿಸಿ, ಮೆಟ್ರೋ, ವಿಮಾನ, ರೈಲು ಸಂಚಾರ ಎಂದಿನಂತೆ ನಡೆಯಲಿದೆ. ಹೋಟೆಲ್ ಮಾಲೀಕರು ಕೂಡಾ ನೈತಿಕ ಬೆಂಬಲ ಸೂಚಿಸಿದ್ದು ಸೋಮವಾರ ಹೋಟೆಲ್ ಸೇವೆ ಇರಲಿದೆ ಎಂದು ತಿಳಿಸಿದ್ದಾರೆ.