ನವದೆಹಲಿ, ಸೆ. 27 (DaijiworldNews/MB) : ರೈತ ವಿರೋಧಿ ಹಾಗೂ ಕಾರ್ಪೊರೇಟ್ ಸ್ನೇಹಿ ಎಂದು ಪ್ರತಿಪಕ್ಷಗಳು ಆರೋಪ ಮಾಡಿರುವ ಮೂರು ವಿವಾದಾತ್ಮಕ ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾನುವಾರ ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ತೀವ್ರ ವಿರೋಧ, ಭಾರಿ ಪ್ರತಿಭಟನೆ ನಡೆಯುತ್ತಿರುವ ಮಧ್ಯೆಯೇ ಈ ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಸ್ತು ಎಂದಿದ್ದಾರೆ ಎಂದು ವರದಿ ತಿಳಿಸಿದೆ.
ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ ಮಸೂದೆ 2020 (ಉತ್ತೇಜನ ಮತ್ತು ಸೌಲಭ್ಯ) ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಹಾಗೂ ರೈತರಿಗೆ ಗುತ್ತಿಗೆ ಕೃಷಿಗೆ ಪ್ರವೇಶಿಸಲು ಚೌಕಟ್ಟನ್ನು ಒದಗಿಸುವ ಮಸೂದೆಗಳಿಗೆ ಸಂಸತ್ನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಭಾರಿ ವಿರೋಧದ ನಡುವೆಯೇ ಇತ್ತೀಚೆಗೆ ಅನುಮೋದನೆ ಪಡೆಯಲಾಗಿತ್ತು. ಆದರೆ ಈ ಮಸೂದೆಗಳನ್ನು ವಿರೋಧಿಸಿ ದೇಶಾದಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿದೆ.
ವಿಪಕ್ಷಗಳು ಈ ಮಸೂದೆಗಳು ರೈತ ವಿರೋಧಿ ಎಂದು ಆರೋಪ ಮಾಡಿದ್ದು ಸರ್ಕಾರವು ಈ ಮಸೂದೆಗಳು ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತದೆ ಎಂದು ಪ್ರತಿಪಾದಿಸಿದ್ದವು. ಸಂಸತ್ತಿನ ಎಲ್ಲಾ ನಿಯಮಗಳನ್ನು 'ಸಂಪೂರ್ಣವಾಗಿ ಕಡೆಗಣಿಸಿ' ಸಂವಿಧಾನಬಾಹಿರವಾಗಿ ಈ ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದು ಆರೋಪ ಮಾಡಿರುವ ವಿಪಕ್ಷಗಳು ಈ ವಿವಾದಾತ್ಮಕ ಮಸೂದೆಗಳಿಗೆ ಸಹಿ ಹಾಕದಂತೆ ರಾಷ್ಟ್ರಪತಿ ಕೋವಿಂದ್ ಅವರನ್ನು ಒತ್ತಾಯಿಸಿದ್ದವು.
ಹಾಗೆಯೇ ನೂತನ ಕೃಷಿ ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿ ಶಿರೋಮಣಿ ಅಕಾಲಿದಳ ಬಿಜೆಪಿ ಮೈತ್ರಿ ತೊರೆದು ಎನ್ಡಿಎ ಒಕ್ಕೂಟದಿಂದ ಹೊರ ಬರಲು ನಿರ್ಧರಿಸಿದೆ.