ಬೆಂಗಳೂರು,ಸೆ 28 (DaijiworldNews/HR): ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ತಂಡದ (ಎನ್ಐಎ) ಶಾಶ್ವತ ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಕೇಂದ್ರ ಸರಕಾರದಿಂದ ಗ್ರೀನ್ ಸಿಗ್ನಲ್ ದೊರಕಿದೆ.
ಇದೀಗ ಹೆಚ್ಚುತ್ತಿರುವ ಉಗ್ರಗಾಮಿ ಕೃತ್ಯಗಳನ್ನು ಮಟ್ಟಹಾಕಲು ಎನ್ಐಎ ಕಚೇರಿ ಬೆಂಗಳೂರಿನಲ್ಲಿ ಆರಂಭಿಸುವಂತೆ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬುದಾಗಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಇನ್ನು ಆಗಸ್ಟ್ನಲ್ಲಿ ಬೆಂಗಳೂರಿನ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆಗಳನ್ನು ಪರಿಶೀಲಿಸಿದಾಗ ದೇಶ ವಿರೋಧಿ ಸಂಘಟನೆಗಳು ರಾಜಧಾನಿಯನ್ನು ಆಶ್ರಯ ತಾಣವಾಗಿ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ದಕ್ಷಿಣ ಭಾರತದ ಪ್ರಮುಖ ಆರ್ಥಿಕ ಕೇಂದ್ರವಾಗಿರುವ ಬೆಂಗಳೂರು ನಗರವನ್ನು ಉಗ್ರಗಾಮಿ, ದೇಶ ವಿರೋಧಿ ಕೃತ್ಯಗಳಿಂದ ಮುಕ್ತವಾಗಿಡುವುದಕ್ಕೆ ಎನ್ಐಎ ಪ್ರಾದೇಶಿಕ ಕಚೇರಿಯ ಅಗತ್ಯವಿದ್ದು, ದೇಶವಿರೋಧಿ ಕೃತ್ಯಗಳ ವಿರುದ್ಧ ತುರ್ತು ಕ್ರಮ ಕೈಗೊಳ್ಳಲು ಶಾಶ್ವತ ಕಚೇರಿ ಆರಂಭಿಸಿ ಅಗತ್ಯ ಸಿಬಂದಿ ಒದಗಿಸುವಂತೆ ತೇಜಸ್ವಿ ಸೂರ್ಯ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದರು.
ಇದೀಗ ಎನ್ಐಎ ಸ್ಟೇಷನ್ ಹೌಸ್ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವುದರಿಂದ ರಾಜ್ಯದಲ್ಲಿ ಏನೇ ಆದರೂ ನಿಭಾಯಿಸಲು ಸುಲಭವಾಗುತ್ತದೆ ಎಂದು ಸಂಸದರು ತಿಳಿಸಿದ್ದಾರೆ.