ನವದೆಹಲಿ,ಸೆ 28 (DaijiworldNews/HR): ಕೇಂದ್ರ ಮತ್ತು ರಾಜ್ಯ ಸರ್ಕಾರ ಭೂ ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಮಸೂದೆಗಳ ವಿರೋಧಿಸಿ ಇಂದು ನಡೆಸುತ್ತಿರುವ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ದೆಹಲಿಯ ಇಂಡಿಯಾ ಗೇಟ್ ಬಳಿ ಟ್ರ್ಯಾಕ್ಟರ್ ವೊಂದಕ್ಕೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿರುವುದಾಗಿ ವರದಿ ತಿಳಿಸಿದೆ.
ಸಂಸತ್ ನಲ್ಲಿ ರೈತರ ಹಾಗೂ ವಿಪಕ್ಷಗಳ ವಿರೋಧದ ನಡುವೆಯೇ ಅಂಗೀಕಾರವಾಗಿರುವ ಕೃಷಿ ಸಂಬಂಧಿ ಮೂರು ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾನುವಾರ ಅಂಕಿತ ಹಾಕಿದ್ದಾರೆ.
ಇನ್ನು ದೆಹಲಿಯ ಸೆಂಟ್ರಲ್ ಪ್ರದೇಶದಲ್ಲಿ ಬೆಳಗ್ಗೆ 15ರಿಂದ 20 ಮಂದಿ ಗುಂಪುಗೂಡಿದ್ದು, ಹಳೆಯ ಟ್ರ್ಯಾಕ್ಟರ್ ವೊಂದಕ್ಕೆ ಬೆಂಕಿ ಹಚ್ಚಿದ್ದರು. ಪೊಲೀಸರ ಹೇಳಿಕೆ ಪ್ರಕಾರ, ಪ್ರತಿಭಟನಾಕಾರರು ಕಾಂಗ್ರೆಸ್ ಪರ ಘೋಷಣೆ ಕೂಗುತ್ತಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.
ಕೃಷಿ ಮಸೂದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಮುಖ್ಯವಾಗಿ ಪಂಜಾಬ್ ಮತ್ತು ಹರ್ಯಾಣದಲ್ಲಿ ತೀವ್ರ ವಿರೋಧ, ಪ್ರತಿಭಟನೆ ವ್ಯಕ್ತವಾಗಿದೆ.