ಬೆಂಗಳೂರು, ಸೆ. 28 (DaijiworldNews/MB) : ಬೆಂಗಳೂರು ನಗೆ ಉಗ್ರ ಚಟುವಟಿಕೆಗಳ ತಾಣವಾಗುತ್ತಿದೆ ಎಂದು ಹೇಳಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಶಾಸಕಿ ಸೌಮ್ಯ ರೆಡ್ಡಿ ಸೇರಿದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೇಜಸ್ವಿ ಸೂರ್ಯ ವಿರುದ್ಧ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಅವರು, ನಮ್ಮ ಬೆಂಗಳೂರು ಭಯೋತ್ಪಾದಕ ಹಬ್? ನಾನು ಅದನ್ನು ಖಂಡಿಸುತ್ತೇನೆ. ನನ್ನ ನಗರ ಸುಂದರವಾಗಿದೆ, ಕಾಸ್ಮೋಪಾಲಿಟನ್, ವೈವಿಧ್ಯಮಯವಾಗಿದೆ, ಐಟಿ / ಬಿಟಿ ಹಬ್ ಆಗಿದೆ. ಸುರಕ್ಷಿತ, ಶಾಂತಿಯುತ / ಸಿಲಿಕಾನ್ ನಗರವಾಗಿದೆ ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿಯು ನಮ್ಮ ನಗರದ ಬಗ್ಗೆ ಕೆಟ್ಟ ಕಲ್ಪನೆ ಉಂಟು ಮಾಡಲು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಬಿಬಿಎಂಪಿ -ಬಿಜೆಪಿ, ರಾಜ್ಯ - ಬಿಜೆಪಿ, ಕೇಂದ್ರ -ಬಿಜೆಪಿ, 25/28 ಸಂಸದರು ಬಿಜೆಪಿಯವರು, ಈ ಜನರು ಏನು ಮಾಡುತ್ತಿದ್ದಾರೆ? ಕಡ್ಲೆ ಪುರಿ ತಿನ್ನುತ್ತಿದ್ದೀರಾ? ನಮ್ಮ ನಗರವು ಈ ಜನರಿಗೆ ಎಲ್ಲವನ್ನೂ ನೀಡಿದೆ. ಆದರೆ ಈ ಜನರು ತಮ್ಮ ಅಜೆಂಡಾದಿಂದಾಗಿ ನಮ್ಮ ನಗರವನ್ನು ಹಾಳು ಮಾಡಲು, ದೂಷಿಸುತ್ತಿದ್ದಾರೆ? ಈ ಹೇಳಿಕೆಯಿಂದಾಗಿ 1.2 ಕೋಟಿ ಜನರು ನೊಂದಿದ್ದು ನಾವು ಇಂತಹ ಅಸಂಬದ್ದ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು ಭಯೋತ್ಪಾದಕ ಕೇಂದ್ರವಾಗಿದೆ ಎಂದು ತಾನು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನಾದ ಮರುದಿನ ಹೇಳಿದ್ದರು.