ಬೆಂಗಳೂರು, ಸೆ. 28 (DaijiworldNews/MB) : ತಾಕತ್ ಇದ್ದರೆ ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸವಾಲು ಎಸೆದಿದ್ದಾರೆ.
ರೈತ ವಿರೋಧಿ ಮಸೂದೆಗಳ ವಿರುದ್ದವಾಗಿ ರಾಜ್ಯದಲ್ಲಿ ರೈತರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಇದೀಗ ಈ ಮಸೂದೆಯ ವಿರುದ್ದ ಕಿಡಿಕಾರಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದಾರೆ.
ರೈತ ವಿರೋಧಿ ಬಿ ಎಸ್ ಯಡಿಯೂರಪ್ಪ ಅವರೇ, ಚುನಾವಣಾ ಪ್ರಣಾಳಿಕೆಯಲ್ಲಿ ಹೇಳದೆ ಇರುವ ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿಗೆ ನಿಮಗೆ ಯಾವ ನೈತಿಕತೆ ಇದೆ? ನಿಮಗೆ ತಾಕತ್ ಇದ್ದರೆ ಮೊದಲು ವಿಧಾನಸಭೆಯನ್ನು ವಿಸರ್ಜಿಸಿ, ಇದೇ ವಿಷಯವನ್ನು ಮುಂದಿಟ್ಟು ಚುನಾವಣೆ ಎದುರಿಸಿ ಎಂದು ಸವಾಲೆಸೆದಿದ್ದಾರೆ.
ಕೊರೊನಾ ಸಂಕಟದಿಂದಾಗಿ ಕಷ್ಟ-ನಷ್ಟಕ್ಕೀಡಾಗಿರುವ ರೈತರು ಬೀದಿಗೆ ಬರಲಾರರು ಎಂಬ ದುಷ್ಟ ಆಲೋಚನೆಯಿಂದ ಈ ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತಂದಿದ್ದೀರಲ್ಲಾ? ಎಂದು ಪ್ರಶ್ನಿಸಿರುವ ಅವರು ಕಣ್ಣು ಬಿಟ್ಟು ರಾಜ್ಯದ ಬೀದಿಗಳನ್ನು ನೋಡಿ, ರೈತರು ಪ್ರಾಣವನ್ನು ಲೆಕ್ಕಿಸದೆ ಬೀದಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬಿಎಸ್ವೈ ಅವರೇ, ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಹಾವೇರಿಯಲ್ಲಿ ರೈತರನ್ನು ಗುಂಡಿಟ್ಟು ಸಾಯಿಸಿದಿರಿ, ಈ ಬಾರಿ ಮುಖ್ಯಮಂತ್ರಿಯಾದಾಗ ಇಡೀ ರೈತ ಸಮುದಾಯವನ್ನೇ ಸಾಯಿಸಲು ಹೊರಟಿದ್ದೀರಿ? ನೊಂದ ರೈತರ ಕಣ್ಣೀರ ಶಾಪ ನಿಮಗೆ ತಟ್ಟದೆ ಇರದು ಎಂದು ಆಕ್ರೋಶಗೊಂಡಿದ್ದಾರೆ.
ಕಾವೇರಿ-ಕೃಷ್ಣ ನದಿನೀರು ಹಂಚಿಕೆಯಲ್ಲಿ ದ್ರೋಹ ಎಸಗಿದ್ದೀರಿ, ಮಹದಾಯಿ-ಮೇಕೆದಾಟು ಯೋಜನೆಗಳಲ್ಲಿ ಮೋಸ ಮಾಡಿದಿರಿ. ಬೀಜ-ರಸಗೊಬ್ಬರ ಪೂರೈಕೆ ಮಾಡದೆ ರೈತರನ್ನು ಗೋಳುಹೊಯ್ಕೊಂಡಿರಿ. ಬಿಎಸ್ವೈ ಅವರೇ, ನಿಮ್ಮ ಬಿಜೆಪಿಗೆ ಯಾಕೆ ರೈತರ ಮೇಲೆ ಇಷ್ಟೊಂದು ದ್ವೇಷ? ಕರ್ನಾಟಕದ ಬಗ್ಗೆ ಯಾಕೆ ಸೇಡಿನ ಭಾವನೆ? ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ವೈ ಅವರೇ, ನೀವು ರೈತ ಸಮುದಾಯದ ಎದುರು ಬೆತ್ತಲಾಗಿದ್ದೀರಿ, ನೀವು ಹೊದ್ದುಕೊಂಡಿರುವ ಯಾವ ಹಸಿರು ಶಾಲು ಕೂಡಾ ನಿಮ್ಮ ಮಾನ ಮುಚ್ಚಲಾರದು. ನೀವು ನಿಜವಾಗಿಯೂ ರೈತರ ಪರವಾಗಿದ್ದರೆ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರೈತರ ಜೊತೆ ನಿಂತುಕೊಳ್ಳಿ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬಿಎಸ್ವೈ ಅವರೇ,ದೇಶವನ್ನೇ ಕಾರ್ಪೋರೇಟ್ ಕುಳಗಳಿಗೆ ಮತ್ತು ರಿಯಲ್ ಎಸ್ಟೇಟ್ ಧಣಿಗಳಿಗೆ ಮಾರಾಟ ಮಾಡಲು ಹೊರಟಿರುವ ಮೋದಿಯವರ ತಾಳಕ್ಕೆ ನೀವು ಕುಣಿಯತೊಡಗಿದರೆ ವರ್ತಮಾನ ಮಾತ್ರವಲ್ಲ, ಇತಿಹಾಸವೂ ನಿಮ್ಮನ್ನು ಕ್ಷಮಿಸಲಾರದು. ಈಗಲೂ ಕಾಲ ಮಿಂಚಿಲ್ಲ, ಆತ್ಮಸಾಕ್ಷಿಗೆ ಕರೆಗೊಟ್ಟು ರೈತರ ಬೇಡಿಕೆ ಒಪ್ಪಿಕೊಳ್ಳಿ ಎಂದು ಹೇಳಿದ್ದಾರೆ.