ಬೆಂಗಳೂರು, ಸೆ. 28 (DaijiworldNews/MB) : ರೈತನ ಮಗನಾದ ನಾನು ಸದಾ ಕೃಷಿಕರ ಪರ. ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ಹೇಳಿದ್ದಾರೆ.
ಕೃಷಿ ಮಸೂದೆಗಳ ವಿರುದ್ದ ಇಂದು ರಾಜ್ಯದ್ಯಂತ ರೈತರ ಪ್ರತಿಭಟನೆ ಹಾಗೂ ಬಂದ್ ವಿಚಾರವಾಗಿ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಿತೂರಿಯಿಂದಾಗಿ ರೈತರಿಂದು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರಿಗೆ ಈ ಮಸೂದೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಪ್ರತಿಭಟನೆ ಮಾಡಲೇ ಬೇಕು ಎಂಬ ಉದ್ದೇಶದಿಂದ ಪ್ರತಿಭಟನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಾನು ರೈತನ ಮಗ, ಸದಾ ರೈತರ ಪರವಾಗಿರುತ್ತೇನೆ. ಅಧಿಕಾರಕಾದ ದುರಾಸೆಯಿಂದ ಆಡಳಿತ ನಡೆಸುತ್ತಿಲ್ಲ. ನಾನು ಎಂದಿಗೂ ರೈತರಿಗೆ ಕೆಟ್ಟಿದಾಗಲು ಬಿಡಲಾರೆ ಎಂದು ಭರವಸೆ ನೀಡಿದ್ದಾರೆ.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದಾಗಿ ಯಾರೂ ಬೇಕಾದರೂ ಕೃಷಿ ಮಾಡಬಹುದಾಗಿದೆ. ಕೃಷಿಗೆ ಉಪಯುಕ್ತವಲ್ಲದ ಭೂಮಿಯಲ್ಲಿ ಕೈಗಾರಿಕೆ ಆರಂಭಿಸಬಹುದು. ಆದರೆ ನೀರಾವರಿ ಭೂಮಿಯಲ್ಲಿ ಕೃಷಿಯನ್ನೇ ಮಾಡಬೇಕಾಗಿದೆ. ಈ ಅಂಶವು ತಿದ್ದುಪಡಿ ಮಸೂದೆಯಲ್ಲಿದೆ. ಹಾಗೆಯೇ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದಾಗಿ ರೈತರು ತಮ್ಮ ಬೆಳೆಯನ್ನು ಎಪಿಎಂಸಿ ಅಥವಾ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ನಾವು ಎಪಿಎಂಸಿ ಮುಚ್ಚಲ್ಲ. 6 ತಿಂಗಳಿಂದ 1 ವರ್ಷದವರೆಗೆ ನೋಡಿ ನಿಮಗೆ ಎಲ್ಲಾ ವಿಚಾರಗಳು ತಿಳಿದು ಬರುತ್ತದೆ ಎಂದು ಹೇಳಿದರು.