ಬೆಂಗಳೂರು,ಸೆ 28 (DaijiworldNews/HR): ವಿಧಾನಸಭೆ ಅಧಿವೇಶನ ಸೆ. 21ರಿಂದ 26ರವರೆಗೆ 6 ದಿನಗಳ ಕಾಲ 40 ಗಂಟೆಗಳ ಕಾರ್ಯಕಲಾಪ ನಡೆಸಲಾಗಿದೆ. ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ ಹಾಗೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಿಗೆ ಗೌರವಪೂರ್ವಕವಾಗಿ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಲಾಗಿದೆ. ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಗೇರಿ, ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ನೀಡಿರುವ 2018-19ನೇ ಸಾಲಿನ ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸು, ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿ ಹಾಗೂ 74ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ವರದಿಯನ್ನು ಸದನವನ್ನು ಮಂಡಿಸಲಾಗಿದೆ.
ಇನ್ನು ಒಟ್ಟು 3071 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 1109 ಪ್ರಶ್ನೆಗಳ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಗಿದೆ ಮತ್ತು ಈ ಅಧಿವೇಶನದಲ್ಲಿ ಸದಸ್ಯರಿಗೆ ಮತ್ತು ಪತ್ರಿಕಾ ಮಾಧ್ಯಮದವರಿಗೆ ಲಿಖಿತ ಮೂಲಕ ಉತ್ತರಿಸಲಾಗುವ ಪ್ರಶ್ನೆಗಳಿಗೆ ಉತ್ತರಗಳನ್ನು ಈಮೇಲ್ ಮೂಲಕ ಒದಗಿಸಿರುವುದು ಒಂದು ವಿಶೇಷವಾಗಿದೆ ಎಂದರು.
ವಿಧಾನ ಪರಿಷತ್ ನಲ್ಲಿ ತಿದ್ದುಪಡಿಗಳೊಂದಿಗೆ 2 ಧನ ವಿನಿಯೋಗ ವಿಧೇಯಕ, 37 ವಿಧೇಯಕಗಳ ಪೈಕಿ 36 ವಿಧೇಯಕ ಅಂಗೀಕಾರವಾಗಿದೆ. 1 ವಿಧೇಯಕ ತಡೆ ಹಿಡಿಯಲಾಗಿದೆ. ನಿಯಮ 60 ಅಡಿಯಲ್ಲಿ ನೀಡಿದ್ದ 3 ನಿಲುವಳಿ, 20 ಸೂಚನೆಗಳು ನಿಯಮಗಳ 69 ಅಡಿಯಲ್ಲಿ ಸ್ಪೀಕರಿಸಲಾಗಿದೆ. 1 ಸೂಚನೆ ಮೇಲೆ ಚೆರ್ಚಿಸಲಾಗಿದೆ. ಒಟ್ಟು 3071 ಪ್ರಶ್ನೆಗಳನ್ನು ಸ್ಚೀಕರಿಸಲಾಗಿದ್ದು ಅದರಲ್ಲಿ 1109 ಪ್ರಶ್ನೆಗಳನ್ನು ಸದನದಲ್ಲಿ ಮಂಡಿಸಲಾಗಿದೆ ಎಂದರು.
ಇನ್ನು 15ನೇ ವಿಧಾನಸಭೆಯ ಸದಸ್ಯರ ಪರಿಚಯ ಪುಸ್ತಕವನ್ನು ಪ್ರಕಟಿಸಿ ಸದಸ್ಯರಿಗೆ ಒದಗಿಸಲು ಕ್ರಮಕೈಗೊಳ್ಳಲಾಗಿದೆ. ವಿಶೇಷವಾಗಿ ಕೊರೊನಾ ವೈರಸ್ ಹಾವಳಿಯ ಸಂದರ್ಭದಲ್ಲಿ ಸದನ ನಡೆಸಲು ಸಹಕರಿಸಿದ ಸಭಾ ನಾಯಕರಾದ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು, ಸಚಿವರು ಸೇರಿದಂತೆ ಎಲ್ಲರಿಗೂ ಈ ಸಂಧರ್ಭದಲ್ಲಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.