ಲಕ್ನೋ, ಸೆ. 28 (DaijiworldNews/MB) : ಕೃಷ್ಣ ಜನ್ಮಭೂಮಿ ಜಮೀನಿನ ಸಂಪೂರ್ಣ 13.37 ಎಕರೆ ಭೂಮಿಯು ಹಿಂದೂಗಳಿಗೆ ಸೇರಿದ್ದು, ಕೃಷ್ಣ ಜನ್ಮಭೂಮಿಯ ಪಕ್ಕಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಕೋರಿ ಮಥುರಾ ನ್ಯಾಯಾಲಯದಲ್ಲಿ ದಾವೆ ಹೂಡಿದ ಎರಡು ದಿನಗಳ ಬೆನ್ನಲ್ಲೇ ಈ ವಿಚಾರದಲ್ಲಿ ರಾಜಕೀಯ ಪ್ರಾರಂಭವಾಗಿದೆ.
ನ್ಯಾಯಾಲಯದಲ್ಲಿ ಹೂಡಿರುವ ಈ ದಾವೆಯನ್ನು ಬಿಜೆಪಿಯ ಮಾಜಿ ಸಂಸದ ಮತ್ತು ಭಜರಂಗದಳದ ಸಂಸ್ಥಾಪಕ ವಿನಯ್ ಕಟಿಯಾರ್ ಅವರು ಸ್ವಾಗತಿಸಿದ್ದು ಕೃಷ್ಣ ಜನ್ಮಭೂಮಿ 'ಸ್ವತಂತ್ರಗೊಳಿಸಲು' ಅಯೋಧ್ಯೆಯಂತಹ ಬೃಹತ್ ಆಂದೋಲನವನ್ನು ಆರಂಭಿಸಬೇಕು ಎಂದು ಹೇಳಿದ್ದಾರೆ.
"ಅಯೋಧ್ಯೆ, ಮಥುರಾ ಮತ್ತು ಕಾಶಿಯಲ್ಲಿರುವ ಮೂರು ದೇವಾಲಯಗಳನ್ನು ಮುಕ್ತಗೊಳಿಸುವುದು ನಮ್ಮ ಸಂಕಲ್ಪವಾಗಿದೆ. ಈಗ ರಾಮ ದೇವಾಲಯ ನಿರ್ಮಾಣ ಸಂಪೂರ್ಣವಾಗಿ ಅಡೆತಡೆಯಿಲ್ಲದ ಹಾದಿಯಾಗಿದೆ. ಇನ್ನು ನಾವು ಕೃಷ್ಣ ಜನ್ಮಭೂಮಿ ಮುಕ್ತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಶ್ರೀಕೃಷ್ಣನ ಜನ್ಮಸ್ಥಳವಾಗಿರುವ ಮಥುರಾದ ಹಕ್ಕನ್ನು ಮುಸ್ಲಿಮರು ಸ್ವಯಂಪ್ರೇರಣೆಯಿಂದ ತ್ಯಜಿಸಿದರೆ ಉತ್ತಮ ಎಂದು ಹೇಳಿದ್ದಾರೆ.
ಬಿಜೆಪಿ ಸಂಸದ ಹರ್ನಾಥ್ ಸಿಂಗ್ ಯಾದವ್ ಕೂಡಾ ಈ ಮಾತುಗಳನ್ನೇ ಹೇಳಿದ್ದು ಕೃಷ್ಣ ಜನ್ಮಭೂಮಿ ಮೇಲಿನ ಹಕ್ಕನ್ನು ಮುಸ್ಲಿಂಮರು ತ್ಯಜಿಸಬೇಕು. ಯಾಕೆಂದರೆ ಇಸ್ಲಾಂ ಧರ್ಮವು ಬಲವಂತವಾಗಿ ಆಕ್ರಮಿಸಿಕೊಂಡಿರುವ ಯಾವುದೇ ಭೂಮಿಯಲ್ಲಿ ಪ್ರಾರ್ಥನೆ ಮಾಡುವುದಕ್ಕೆ ಅನುಮತಿ ನೀಡುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಇನ್ನು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಬಾಬ್ರಿ ಮಸೀದಿ ಪ್ರರಕಣದ ಫಿರ್ಯಾದಿದಾರರಾದ ಇಕ್ಬಾಲ್ ಅನ್ಸಾರಿ ಅವರು, ಈ ರೀತಿಯ ರಾಜಕೀಯಕ್ಕೆ ಅಂತ್ಯವಿರಬೇಕು. ಪ್ರಸ್ತುತ ಹಿಂದೂಗಳು ಮತ್ತು ಮುಸ್ಲಿಮರು ಶಾಂತಿ ಮತ್ತು ಸೌಹಾರ್ದತೆಯಿಂದ ಬಾಳುತ್ತಿದ್ದು ಈ ರೀತಿಯೇ ವಾಸಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
"ಹಿಂದೂ-ಮುಸ್ಲಿಂ ದ್ವೇಷಕ್ಕೆ ಉತ್ತೇಜನ ನೀಡುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿವೆ. ಆದರೆ ಇದು ರಾಷ್ಟ್ರದ ಹಿತದೃಷ್ಟಿಯಿಂದಲ್ಲ. ಅಯೋಧ್ಯೆ ವಿವಾದ ಮುಗಿದಿದ್ದು ಮುಸ್ಲಿಮರು ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಂಡಿದ್ದಾರೆ. ಬಳಿಕ ಈಗ ಮತ್ತೆ ಇತರ ಸಮಸ್ಯೆಗಳನ್ನು ಹುಟ್ಟುಹಾಕುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.
ಸುನ್ನಿ ವಕ್ಫ್ ಮಂಡಳಿಯ ಹಿರಿಯ ವಕೀಲ ಜಫರ್ಯಾಬ್ ಜಿಲಾನಿ ಅವರು ಅಯೋಧ್ಯೆ ವಿವಾದದ ವಿಚಾರವಾಗಿ ರಾಜಕೀಯ ಲಾಭಕ್ಕಾಗಿ ಇಂತಹ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಎತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದರು. ಹಾಗೆಯೇ "ಈ ವಿಷಯದಲ್ಲಿ 1951 ರಲ್ಲಿ ರಾಜಿ ಮಾಡಿಕೊಳ್ಳಲಾಗಿತ್ತು. ಆದರೆ ಮತ್ತೆ ಹಿಂದೂ ಮುಸ್ಲಿಮರ ಐಕ್ಯತೆಗೆ ಧಕ್ಕೆ ಉಂಟು ಮಾಡಲು ಹೊಸ ದಾವೆ ಹೂಡಲಾಗಿದೆ. ಇದು ರಾಜಕೀಯವಲ್ಲದಿದ್ದರೆ ಮತ್ತಿನ್ನೇನು? " ಎಂದು ಪ್ರಶ್ನಿಸಿದರು.
ಮಥುರಾದಲ್ಲಿರುವ ಶ್ರೀ ಕೃಷ್ಣ ದೇಗುಲ ಸಂಕೀರ್ಣದ ಪಕ್ಕದಲ್ಲಿಯೇ ಇರುವ ಶಾಹಿ ಈದ್ಗಾ ಕಟ್ಟಡವನ್ನು ತೆಗೆದು ಹಾಕಬೇಕೆಂದು ಕೋರಿ ಬಾಲ ಕೃಷ್ಣ- ಭಗವಾನ್ ಶ್ರೀ ಕೃಷ್ಣ ವಿರಾಜಮಾನ್ ಪರವಾಗಿ ಮಥುರಾದ ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯವೊಂದನ್ನು ಲಕ್ನೋ ನಿವಾಸಿ ರಂಜನಾ ಅಗ್ನಿಹೋತ್ರಿ ಎಂಬವರು ದಾಖಲಿಸಿದ್ದಾರೆ.
ಶ್ರೀ ರಾಮ್ ಲಲ್ಲಾ ವಿರಾಜ್ಮನ್ 1989 ರಲ್ಲಿ ಅಯೋಧ್ಯೆಯಲ್ಲಿ ಸಿವಿಲ್ ದಾವೆಯ ತೀರ್ಪನ್ನು ಸುಪ್ರೀಂ ಕೋರ್ಟ್ 2019 ರ ನವೆಂಬರ್ನಲ್ಲಿ ನೀಡಿದ್ದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ.
ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಹಾಗೂ ಶಾಹಿ ದರ್ಗಾದ ಆಡಳಿತ ಟ್ರಸ್ಟ್ ಅನ್ನು ಈ ವ್ಯಾಜ್ಯದಲ್ಲಿ ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ. ದೇವಾಲಯದ ಪಕ್ಕದಲ್ಲಿರುವ ಮಸೀದಿಯ 13.37 ಎಕರೆ ಜಮೀನನ್ನು ದೇವಾಲಯಕ್ಕೆ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
"1991 ರ ಕಾಯಿದೆಯ ನಿಬಂಧನೆಗಳನ್ನು ಅಧ್ಯಯನ ಮಾಡಿದ ನಂತರ ನಾನು ದಾವೆ ಹೂಡಿದ್ದೇನೆ. ನನ್ನ ಅರ್ಜಿಯನ್ನು ಈಗಾಗಲೇ ನ್ಯಾಯಾಲಯವು ಒಪ್ಪಿಕೊಂಡಿದೆ ದಾವೆದಾರರಾದ ರಂಜನಾ ಅಗ್ನಿಹೋತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.