ನವದೆಹಲಿ, ಸೆ. 28 (DaijiworldNews/MB) : ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಮುಂದುವರೆದಿದೆ, ವಿಚಾರಣೆಯು ಹಾದಿ ತಪ್ಪಿಲ್ಲ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಸೋಮವಾರ ತಿಳಿಸಿದೆ.
ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ತನಿಖೆಯು ಹಾದಿ ತಪ್ಪಿದೆ ಎಂದು ಕುಟುಂಬದ ವಕೀಲರು ಆರೋಪಿಸಿದ್ದರು. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಬಿಐ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಮುಂದುವರೆದಿದೆ. ತನಿಖೆ ಹಾದಿ ತಪ್ಪಿಲ. ನಾವು ಎಲ್ಲಾ ದಿಕ್ಕುಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ನಾವು ವೃತ್ತಿಪರ ತನಿಖೆಯನ್ನು ನಡೆಸುತ್ತಿದ್ದು ಎಲ್ಲಾ ಅಂಶಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಇಲ್ಲಿಯವರೆಗೆ ಯಾವ ಅಂಶವನ್ನು ತಳ್ಳಿಹಾಕಿಲ್ಲ ಎಂದು ತಿಳಿಸಿದ್ದಾರೆ.
ವಕೀಲ ವಿಕಾಸ್ ಸಿಂಗ್ ಅವರು, ಸುಶಾಂತ್ ಸಿಂಗ್ ಸಾವು ಪ್ರಕರಣದ ದಿಕ್ಕನ್ನು ತಪ್ಪಿಸಲಾಗುತ್ತಿದೆ. ಈ ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ತಿರುಗಿಸಲಾಗುತ್ತಿದೆ ಎಂದು ತಿಳಿಯಲು ಸಾಧ್ಯವಾಗದ ಕಾರಣ ನಾವೀಗ ಅಸಹಾಯಕರಾಗಿದ್ದೇವೆ. ಇಂದಿನವರೆಗೂ ಸಿಬಿಐ ತನಿಖೆಯಲ್ಲಿ ಯಾವ ಸತ್ಯಾಂಶಗಳು ಕಂಡುಬಂದಿವೆ ಎಂಬುದರ ಬಗ್ಗೆ ಪತ್ರಿಕಾಗೋಷ್ಠಿ ನಡೆಸಲಾಗಿಲ್ಲ' ಎಂದು ಆರೋಪ ಮಾಡಿದ್ದಾರೆ.