ಮುಂಬೈ, ಸೆ. 28 (DaijiworldNews/MB) : ಶಿವಸೇನೆ ಬಿಜೆಪಿ ಜೊತೆ ಸೇರಲಿ, ಇಲ್ಲವೇ ಮಹಾರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಆದರೂ ಎನ್ಡಿಎ ಸೇರಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ) ನಾಯಕರೂ ಆಗಿರುವ ಕೇಂದ್ರ ಸಾಮಾಜ ಕಲ್ಯಾಣ ಇಲಾಖೆ ರಾಜ್ಯ ಸಚಿವ ರಾಮದಾಸ್ ಅಠವಾಳೆ ಹೇಳಿದ್ದಾರೆ.
ಮುಂಬೈನಲ್ಲಿ ಸೋಮವಾರ ಮಾತನಾಡಿರುವ ಅವರು, ಶಿವಸೇನೆ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಬೇಕು. ಶಿವಸೇನೆ ನಮ್ಮೊಂದಿಗೆ ಬರದಿದ್ದರೆ, ರಾಜ್ಯದ ಅಭಿವೃದ್ಧಿಗಾಗಿ ಎನ್ಡಿಎಗೆ ಸೇರಲು ನಾನು ಶರದ್ ಪವಾರ್ ಅವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಅವರಿಗೆ ಭವಿಷ್ಯದಲ್ಲಿ ದೊಡ್ಡ ಹುದ್ದೆಯನ್ನು ಪಡೆಯುವ ಅವಕಾಶಗಳಿವೆ. ಅವರು ಶಿವಸೇನೆಯೊಂದಿಗೆ ಇರುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.
2019ರ ವಿಧಾನಸಭೆ ಚುನಾವಣೆ ನಂತರ ಎನ್ಡಿಎ ಮೈತ್ರಿಕೂಟದಲ್ಲಿದ್ದ ಉದ್ಧವ ಠಾಕ್ರೆ ಅವರ ನೇತೃತ್ವದ ಶಿವಸೇನೆ ಬಿಜೆಪಿ ನೇತೃತ್ವದ ಈ ಮೈತ್ರಿಕೂಟವನ್ನು ತೊರೆದಿದ್ದು ಕಾಂಗ್ರೆಸ್, ಎನ್ಸಿಪಿ ಜೊತೆ ಸೇರಿ ಮಹಾ ವಿಕಾಸ ಅಘಾಡಿ ಎಂಬ ಮೈತ್ರಿಕೂಟ ರಚಿಸಿ ಮೈತ್ರಿ ಸರ್ಕಾರ ನಡೆಸುತ್ತಿದೆ.
ಶಿವಸೇನೆಯ ಮುಖ್ಯ ವಕ್ತಾರ ಸಂಜಯ್ ರಾವತ್ ಅವರು ಇತ್ತೀಚೆಗೆ ಬಿಜೆಪಿ ನಾಯಕ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ಪಂಚತಾರ ಹೋಟೆಲ್ವೊಂದರಲ್ಲಿ ಭೇಟಿ ಮಾಡಿದ್ದರು. ಈ ಉಭಯ ನಾಯಕರ ಭೇಟಿಯು ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ ಇಬ್ಬರು ನಾಯಕರೂ ಕೂಡಾ ಕೇವಲ ಸಂದರ್ಶನದ ವಿಚಾರದಲ್ಲಿ ಭೇಟಿಯಾಗಿದ್ದು ಬೇರೆ ಯಾವುದೇ ರಾಜಕೀಯ ಬೆಳವಣಿಗೆಗಳು ಇಲ್ಲ ಎಂದು ತಿಳಿಸಿದ್ದರು. ಈ ನಡುವೆ ಕೇಂದ್ರ ಸಚಿವ ರಾಮದಾಸ್ ಅಠವಾಳೆ ಈ ಹೇಳಿಕೆ ನೀಡಿದ್ದಾರೆ.