ಗದಗ, ಸೆ. 29 (DaijiworldNews/MB) : ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಅತ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ ಇತ್ತ ಇದೇ ಕೊರೊನಾ ಪ್ರಕರಣದ ಸಂಖ್ಯೆಯ ಮೇಲೂ ಬೆಟ್ಟಿಂಗ್ ದಂಧೆ ನಡೆಯುತ್ತಿದೆ.
ಈ ಹಿಂದೆ ಗದಗ, ಗಜೇಂದ್ರ ಗಢ, ರೋಣ, ನರಗುಂದಗಳಲ್ಲಿ ಬಹಿರಂಗವಾಗಿಯೇ ಮಟ್ಕಾ ದಂಧೆ ನಡೆಯುತ್ತಿತ್ತು. ಆದರೆ ಪೊಲೀಸರು ಇದರ ವಿರುದ್ದ ಕ್ರಮಕೈಗೊಂಡಿದ್ದರು. ಆದರೆ ಈಗ ಕೊರೊನಾ ಪ್ರಕರಣದ ಸಂಖ್ಯೆಯ ಮೇಲೆಯೇ ಬೆಟ್ಟಿಂಗ್ ದಂಧೆ ಆರಂಭವಾಗಿದೆ. ದಿನಕ್ಕೆ ಎಷ್ಟು ಕೊರೊನಾ ಪ್ರಕರಣಗಳು ದಾಖಲಾಗುತ್ತದೆ ಎಂದು ಬೆಟ್ಟ್ ಕಟ್ಟಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಇನ್ನು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಮಧ್ಯವರ್ತಿಗಳು , ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡುವ ಆರೋಗ್ಯ ಬುಲೆಟಿನ್ಗಾಗಿ ಕಾದು, ಬುಲೆಟಿನ್ ಬಿಡುಗಡೆಯಾದ ಅರ್ಧ ಗಂಟೆಯಲ್ಲಿ ಯಾರು ಬೆಟ್ಟ್ ಗೆದ್ದರು ಎಂದು ಫಲಿತಾಂಶ ಪ್ರಕಟಿಸುತ್ತಾರೆ. ಹೆಚ್ಚಾಗಿ ಈ ಬೆಟ್ಟಿಂಗ್ ದಂಧೆಗೆ ದಿನಗೂಲಿ ಕಾರ್ಮಿಕರು, ಸಣ್ಣ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ ಎಂದು ಹೇಳಲಾಗಿದೆ.