ಬೆಂಗಳೂರು, ಸೆ 29(DaijiworldNews/PY): ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಮರು ಆರಂಭದ ಬಗ್ಗೆ ಯಾವುದೇ ರೀತಿಯಾದ ತಿರ್ಮಾನವಾಗಿಲ್ಲ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ವಿಚಾರವಾಗಿ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಅವರು, ಶಾಲಾ-ಕಾಲೇಜು ಮರು ಆರಂಭದ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈವರೆಗೆ ಯಾವುದೇ ದಿನಾಂಕ ಕೂಡಾ ಅಂತಿಮವಾಗಿಲ್ಲ. ಅಲ್ಲದೇ, ಸದ್ಯಕ್ಕೆ ಶಾಲಾ-ಕಾಲೇಜುಗಳನ್ನು ಆರಂಭ ಮಾಡುವ ಯೋಚನೆಯು ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾರೆ.
ಶಾಸಕರು ಸೇರಿದಂತೆ ಸಂಸದರ ಹಾಗೂ ಇತರ ಜನಪ್ರತಿನಿಧಿಗಳೊಂದಿಗೆ ಶಾಲಾ-ಕಾಲೇಜು ಆರಂಭದ ವಿಚಾರವಾಗಿ ಅಭಿಪ್ರಾಯ ಪಡೆಯುತ್ತಿದ್ದೇವೆ. ಅಲ್ಲದೇ, ಶಿಕ್ಷಕ ಸಂಘಟನೆ ಹಾಗೂ ಶಿಕ್ಷಣ ತಜ್ಞರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ಅಸ್ಸಾ ಸೇರಿದಂತೆ ಮಧ್ಯಪ್ರದೇಶ ಹಾಗೂ ಕೆಲವೊಂದು ಜಿಲ್ಲೆಗಳಲ್ಲಿ ಈಗಾಗಲೇ ಶಾಲಾ-ಕಾಲೇಜುಗಳನ್ನು ಮರು ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರವೂ ಕೂಡಾ ಶಾಲಾರಂಭ ಮಾಡಲು ಉತ್ಸುಕವಾಗಿತ್ತು. ಈ ನಡುವೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಕೂಡಾ ಸರ್ಕಾರ ಶಾಲಾರಂಭಕ್ಕೆ ಉತ್ಸುಕತೆ ತೋರಿದ್ದು, ಈ ವಿಚಾರವಾಗಿ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು.