ನವದೆಹಲಿ, ಸೆ. 29 (DaijiworldNews/MB) : ಎರಡು ವಾರಗಳ ಹಿಂದೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿದ್ದ ಉತ್ತರ ಪ್ರದೇಶದ 19 ವರ್ಷದ ಯುವತಿ ದೆಹಲಿಯಲ್ಲಿ ಇಂದು ಸಾವನ್ನಪ್ಪಿದ್ದಾಳೆ ಎಂದು ವರದಿ ತಿಳಿಸಿದೆ. ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿದ ದುರುಳರು ಯುವತಿಯ ಮೂಳೆ ಮುರಿಯುವಂತೆ ಹಾಗೂ ನಾಲಿಗೆ ತುಂಡಾಗಿವಂತೆ ಚಿತ್ರಹಿಂಸೆ ನೀಡಿದ್ದರು.
ಅತ್ಯಾಚಾರ ಮಾಡಿದವರು ಇದೀಗ ಜೈಲಿನಲ್ಲಿದ್ದು ದೆಹಲಿಯ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಯುವತಿಯು ಈಗ ಸಾವನ್ನಪ್ಪಿದ್ದಾಳೆ. ಯುವತಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ್ದು ಅತ್ಯಾಚಾರಗೈದ ಆರೋಪಿಗಳು ಮೇಲ್ಜಾತಿಯವರಾಗಿದ್ದಾರೆ. ಉತ್ತರ ಪ್ರದೇಶ ಪೊಲೀಸರು ಆರಂಭದಲ್ಲಿ ಈ ಘಟನೆಗೆ ಸಂಬಂಧಿಸಿ ಯಾವುದೇ ಸಹಾಯ ಮಾಡಿಲ್ಲ. ಬಳಿಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ಪ್ರತಿಕ್ರಿಯಿಸಿದ್ದಾರೆ ಎಂದು ಯುವತಿಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಸೆಪ್ಟೆಂಬರ್ 14 ರಂದು ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹಾಥರಸ ಎಂಬ ಹಳ್ಳಿಯಲ್ಲಿ ತನ್ನ ಕುಟುಂಬದೊಂದಿಗೆ ಹುಲ್ಲು ಕತ್ತರಿಸುತ್ತಿದ್ದ ಯುವತಿಯನ್ನು ಆಕೆಯ ದುಪ್ಪಟ್ಟದಿಂದಲ್ಲೇ ಕಟ್ಟಿ ಪಕ್ಕದ ಹೊಲಕ್ಕೆ ಎಳೆದೊಯ್ದು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹಲ್ಲೆ ಮಾಡಲಾಗಿದೆ. ಆಕೆ ಕಾಣದ ಕಾರಣ ತಾಯಿ ಯುವತಿಯನ್ನು ಸುತ್ತಮುತ್ತ ಹುಡುಕಾಡಿದ್ದು ಆ ಸಂದರ್ಭದಲ್ಲಿ ಯುವತಿ ಪ್ರಜ್ಞೆಯಿಲ್ಲದೆ ಬಿದ್ದರುವುದು ಕಂಡು ಬಂದಿದೆ ಎಂದು ವರದಿ ತಿಳಿಸಿದೆ.
ಇನ್ನು ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕೈದು ದಿನಗಳ ನಂತರ ದೂರು ದಾಖಲಿಸಿಕೊಂಡರು ಎಂದು ಯುವತಿಯ ಸೋದರ ತಿಳಿಸಿದ್ದಾರೆ.
ಈ ಆರೋಪವನ್ನು ತಳ್ಳಿಹಾಕಿರುವ ಉತ್ತರ ಪ್ರದೇಶದ ಪೊಲೀಸರು ನಾವು ತ್ವರಿತವಾಗಿ ಕಾರ್ಯಾಚರಣೆ ಆರಂಭಿಸಿ ಓರ್ವ ಆರೋಪಿಯನ್ನು ಬಂಧಿಸಿದೆವು. ಬಳಿಕ ಮೂವರನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.