ಬೆಳಗಾವಿ, ಸೆ 29(DaijiworldNews/PY): ಸಿದ್ದರಾಮಯ್ಯ ಅವರು ಮಾನ-ಮರ್ಯಾದೆ ಇದ್ದರೆ ಮನೆಯಲ್ಲಿ ಕುಳಿತುಕೊಳ್ಳಬೇಕು. ಮಾಜಿ ಸಿಎಂ ಆಗಿದ್ದ ಅವರು ಗೌರವದಿಂದ ನಡೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿಎಂ ಬಿಎಸ್ವೈ ಅವರು ಡೋಂಗಿ ರಾಜಕಾರಣಿ ಎಂದು ಹೇಳಿದ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದ ಸಂದರ್ಭ ಬೆಂಕಿ ಹಾಕುವ ಕಾರ್ಯ, ಅಧಿಕಾರದಲ್ಲಿದ್ದ ವೇಳೆ ಭ್ರಷ್ಟಾಚಾರ ಮಾಡುತ್ತದೆ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಗೌರವಯುತವಾಗಿ ನಡೆದುಕೊಳ್ಳಬೇಕು. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭ ಮೂರು ಸಾವಿರ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿದ್ದರಾಮಯ್ಯ ಅವರ ಯೋಗ್ಯತೆ, ರೈತರು ಆತ್ಮಹತ್ಯೆ ಮಾಡಿಕೊಂಡಿದ್ದ ಸಂದರ್ಭ ಮನೆಗೆ ಹೋಗದೇ ಇದ್ದಾಗ ತಿಳಿಯುತ್ತಿತ್ತು. ಕಾಂಗ್ರೆಸ್ನವರು ವೀರಪ್ಪನ್ನ ರೀತಿಯಲ್ಲಿ ಆಡಳಿತ ನಡೆಸಿದವರು ಎಂದು ಹೇಳಿದ್ದಾರೆ.
ಟಿಪ್ಪು ಜಯಂತಿ ಹೆಸರಿನಲ್ಲಿ ಗಲಭೆ ಉಂಟು ಮಾಡಿ, ಲಿಂಗಾಯತ ವೀರಶೈವ ಎಂದು ಸಮಾಜ ಒಡೆದರು. ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಬ್ರಿಟೀಷರಿಗಿಂತ ಕೊನೆಯಾದಾಗಿ ಸಮಾಜವನ್ನು ಒಡೆದ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯ. ಹಾಗಾಗಿ ಇಂತಹ ಕೆಟ್ಟ ಮುಖ್ಯಮಂತ್ರಿ ಬೇಡ ಎಂದು ಮೈಸೂರಿಲ್ಲಿ ಮನೆಗೆ ವಾಪಾಸ್ಸು ಕಳುಹಿಸಿದ್ದಾರೆ. ಎಲ್ಲೆಲ್ಲೋ ನಿಂತು ಗೆಲ್ಲುವ ಪರಿಸ್ಥಿತಿ ಓರ್ವ ಮುಖ್ಯಮಂತ್ರಿಗೆ ಬಂದೊದಗಿದೆ. ಸಿದ್ದರಾಮಯ್ಯ ಅವರಿಗೆ ಮಾನ-ಮರ್ಯಾದೆ ಇದ್ದರೆ ಮನೆಯಲ್ಲಿ ಕುಳಿತುಕೊಳ್ಳಲಿ ಎಂದು ತಿಳಿಸಿದ್ದಾರೆ.