ಬೆಂಗಳೂರು, ಸೆ. 29 (DaijiworldNews/MB) : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಮಾಡಿದ್ದಾರೆ ಎಂದು ಹೇಳಲಾಗಿರುವ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದ ಕಾರಣದಿಂದಾಗಿ ಕನ್ನಡ ಸುದ್ದಿ ವಾಹಿನಿ ಪವರ್ ಟಿವಿಯನ್ನು ಬಂದ್ ಮಾಡಲಾಗಿದೆ ಎಂದು ನಿರೂಪಕ ರಹಮಾನ್ ಹಾಸನ್ ಅವರು ತಿಳಿಸಿದ್ದಾರೆ.
ಸರ್ಕಾರದ ಈ ಕ್ರಮದ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು, ''ಸಿಎಂ ಮಗನ ಭ್ರಷ್ಟಾಚಾರದ ವರದಿ ಮಾಡಿದ ಮಾಧ್ಯಮವನ್ನೇ ಮುಚ್ಚಿಸುವ ಹಿಟ್ಲರ್ ಮಾದರಿಯ ಕ್ರಮ'' ಎಂದು ಟೀಕಿಸಿದ್ದಾರೆ.
''ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯುಡಿಯೂರಪ್ಪ ಅವರ ಮಗನ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದ್ದ ಮಾಧ್ಯಮವನ್ನೇ ಮುಚ್ಚಿಸುವ ಹಿಟ್ಲರ್ ಮಾದರಿಯ ಕ್ರಮ. ಪವರ್ ಟಿವಿ ನ್ಯೂಸ್ ವಿರುದ್ದ ಬಿಎಸ್ವೈ ಕಾನೂನು ಚೌಕಟ್ಟಿನಲ್ಲಿ ಹೋರಾಡಬೇಕಿತ್ತು. ಆದರೆ ತಮ್ಮ ತಪ್ಪು ತೋರಿಸಿದ್ದವರನ್ನೇ ಮುಗಿಸಿ ಹಾಕಿದ್ದಾರೆ. ಪತ್ರಿಕಾ ಸ್ವಾತಂತ್ರ್ಯವನ್ನೇ ಹೊಸಕಿ ಹಾಕಿದ ನಿಮ್ಮ ನಡೆ ಅಕ್ಷಮ್ಯ ಮತ್ತು ಖಂಡನೀಯ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.