ನವದೆಹಲಿ, ಸೆ 29(DaijiworldNews/PY): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ, ಯುಪಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರಿಗೆ ಯಾವುದೇ ಸುರಕ್ಷತೆ ಇಲ್ಲ ಎಂದು ಆರೋಪಿಸಿದ್ದಾರೆ.
ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಪ್ರಿಯಾಂಕ, ಹತ್ರಾಸ್ನಲ್ಲಿ ದಲಿತ ಹುಡುಗಿ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಎರಡು ವಾರಗಳ ಕಾಲ ಆಕೆ ಆಸ್ಪತ್ರೆಯಲ್ಲಿ ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದಳು. ಇದಕ್ಕೆ ಕಾರಣರಾದವರಿಗೆ ಕಠಿಣ ಸಜೆಯಾಗಬೇಕು ಎಂದು ತಿಳಿಸಿದ್ದಾರೆ.
ಹತ್ರಾಸ್, ಶಹಜಹಾಪುರ ಹಾಗೂ ಗೋರಖ್ಪುರದಲ್ಲಿ ಒಂದರ ನಂರ ಒಂದು ಅತ್ಯಾಚಾರ ಘಟನೆಗಳು ನಡೆಯುತ್ತಿದ್ದು, ಇದರಿಂದ ರಾಜ್ಯ ಬೆಚ್ಚಿಬಿದ್ದಿದೆ. ಯುಪಿಯಲ್ಲಿ ಕಾನೂನು ಸುವ್ಯವಸ್ಥೆ ಬಹಳ ಮಟ್ಟಿಗೆ ಹದಗೆಟ್ಟಿದೆ. ಮಹಿಳೆಯರಿಗೆ ಯಾವುದೇ ರೀತಿಯಾದ ಸುರಕ್ಷತೆ ಇಲ್ಲ. ಅಪರಾಧಿಗಳು ಮುಕ್ತವಾದಿ ಅಪರಾಧಗಳನ್ನು ಮಾಡುತ್ತಿದ್ದಾರೆ. ಯುಪಿಯಲ್ಲಿ ಮಹಿಳೆಯರ ಸುರಕ್ಷತೆಯ ಜವಾಬ್ದಾರಿ ನಿಮ್ಮ ಮೇಲಿದೆ ಎಂದಿದ್ದಾರೆ.
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಸೆ.14ರಂದು ದಲಿತ ಮಹಿಳೆಯ ಮೇಲೆ ನಾಲ್ಕು ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಘಟನೆಯ ನಂತರ ಆಕೆಯನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಸಾವನ್ನಪ್ಪಿದ್ದಾಳೆ ಎಂದು ವರದಿ ತಿಳಿಸಿದೆ. ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿದ ದುರುಳರು ಯುವತಿಯ ಮೂಳೆ ಮುರಿಯುವಂತೆ ಹಾಗೂ ನಾಲಿಗೆ ತುಂಡಾಗಿವಂತೆ ಚಿತ್ರಹಿಂಸೆ ನೀಡಿದ್ದರು.