ನವದೆಹಲಿ, ಸೆ. 29 (DaijiworldNews/MB) : ಕೃಷಿ ಮಸೂದೆಗಳನ್ನು ವಿರೋಧಿಸುತ್ತಿರುವ ವಿಪಕ್ಷಗಳಿಂದ ರೈತರಿಗೆ ಅವಮಾನವಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ದೆಹಲಿಯ ಇಂಡಿಯಾ ಗೇಟ್ ಸಮೀಪ ಪಂಜಾಬ್ ಯುವ ಕಾಂಗ್ರೆಸ್ ಕಾರ್ಯಕರ್ತರು ಟ್ಯಾಕ್ಟರ್ ಸುಟ್ಟು ಪ್ರತಿಭಟನೆ ಮಾಡಿದ್ದು ಈ ವಿಚಾರವಾಗಿ ಉತ್ತರಾಖಂಡದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ವಿಡಿಯೊ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ವಿರೋಧ ಪಕ್ಷದವರು 'ರೈತರು ಪೂಜಿಸುವ ಯಂತ್ರಗಳು ಹಾಗೂ ಸಲಕರಣೆಗಳನ್ನು ಬೆಂಕಿ ಹಾಕಿ ಸುಡುವ ಮೂಲಕ ರೈತರನ್ನು ಅವಮಾನಿಸಿದ್ದಾರೆ ಎಂದು ದೂರಿದ್ದಾರೆ.
ಅವರು (ಕಾಂಗ್ರೆಸ್) ಕನಿಷ್ಠ ಬೆಂಬಲ ಬೆಲೆ ನಿಗದಿ (ಎಂಎಸ್ಪಿ) ಮಾಡುವುದಾಗಿ ಹಲವು ವರ್ಷಗಳಿಂದ ಹೇಳುತ್ತಲ್ಲೇ ಇದ್ದರು ಆದರೆ ಎಂದಿಗೂ ನಿಗದಿ ಮಾಡೇ ಇಲ್ಲ. ನಮ್ಮ ಸರ್ಕಾರವು ಸ್ವಾಮಿನಾಥನ್ ಸಮಿತಿಯ ಶಿಫಾರಸ್ಸು ಆಧಾರಿಸಿ ಎಂಎಸ್ಪಿ ಜಾರಿ ಮಾಡಿತು. ಹಲವು ವರ್ಷಗಳಿಂದ ನಮ್ಮ ಭದ್ರತಾ ಪಡೆಗಳ ಉನ್ನತಿಗಾಗಿ ಏನನ್ನು ಮಾಡಿಲ್ಲ, ವಾಯುಪಡೆಯು ರಫೇಲ್ ಯುದ್ಧ ವಿಮಾನಕ್ಕಾಗಿ ಕೇಳುತ್ತಲೇ ಇದ್ದರೂ, ಅವರು ಅದನ್ನು ಕೇಳಿಸಿಕೊಳ್ಳಲಿಲ್ಲ. ಆದರೆ ನಾವು ಫ್ರಾನ್ಸ್ನೊಂದಿಗೆ ರಫೇಲ್ಗಾಗಿ ಒಪ್ಪಂದ ಮಾಡಿಕೊಳ್ಳುತ್ತಿದ್ದಂತೆ ಅವರಿಗೆ ಸಮಸ್ಯೆಯಾಗಿ ಕಾಣುತ್ತದೆ ಎಂದು ಹೇಳಿದ್ದಾರೆ.
ಇತ್ತೀಚಿನ ಸಂಸತ್ ಅಧಿವೇಶನದಲ್ಲಿ ರೈತರು, ಕಾರ್ಮಿಕರ ಆರೋಗ್ಯದ ವಿಚಾರವಾಗಿ ಹಲವು ಸುಧಾರಣಾ ಕ್ರಮಗಳನ್ನು ತರಲಾಗಿದ್ದು ಅದರಿಂದಾಗಿ ಕಾರ್ಮಿಕರು, ಯುವಕರು, ಮಹಿಳೆ ಹಾಗೂ ದೇಶದ ರೈತರಿಗೆ ಒಳಿತಾಗಲಿದೆ. ಆದರೆ ಕೆಲವರು ಕೇವಲ ವಿರೋಧ ಮಾಡುವುದ್ದನ್ನೇ ರೂಢಿಸಿಕೊಂಡಿದ್ದಾರೆ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಸೋಮವಾರ ಬೆಳಿಗ್ಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂಡಿಯಾ ಗೇಟ್ ಸಮೀಪದಲ್ಲಿ ಟ್ಯಾಕ್ಟರ್ಗೆ ಬೆಂಕಿ ಹಚ್ಚಿ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟಿಸಿದ್ದರು. ಬೆಂಕಿ ಹಚ್ಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮೂಲದ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ.