ನವದೆಹಲಿ, ಸೆ. 29 (DaijiworldNews/MB) : ಒಂದು ಲೋಕಸಭಾ ಮತ್ತು 56 ವಿಧಾನಸಭಾ ಸ್ಥಾನಗಳಿಗೆ ನ.3 ಮತ್ತು ನ.7ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗವು ಮಂಗಳವಾರ ಪ್ರಕಟನೆಯಲ್ಲಿ ತಿಳಿಸಿದೆ.
ನ.3ರಂದು 56 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದ್ದು ಬಿಹಾರದ ಒಂದು ಲೋಕಸಭಾ ಕ್ಷೇತ್ರ ಮತ್ತು ಮಣಿಪುರದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನ.7ರಂದು ನಡೆಯಲಿದೆ. ಮತಎಣಿಕೆ ನ.10ರಂದು ನಡೆಯಲಿದೆ ಎಂದು ಆಯೋಗ ಮಾಹಿತಿ ನೀಡಿದೆ.
ಆಯೋಗವು ಉಪಚುನಾವಣೆಗಳ ಘೋಷಣೆಗೂ ಮೊದಲು ಹೊರಡಿಸಿದ ಹೇಳಿಕೆಯಲ್ಲಿ, ಆಯಾ ರಾಜ್ಯಗಳ ನಿರ್ದಿಷ್ಟ ಕೋರಿಕೆಯ ಮೇರೆಗೆ ಕೇರಳ,ತಮಿಳುನಾಡು,ಅಸ್ಸಾಂ ಮತ್ತು ಪಶ್ಚಿಮ ಬಂಗಾಳಗಳಲ್ಲಿ ತೆರವಾಗಿರುವ ಒಟ್ಟು ಏಳು ವಿಧಾನಸಭಾ ಸ್ಥಾನಗಳಿಗೆ ಈ ಹಂತದಲ್ಲಿ ಉಪಚುನಾವಣೆ ನಡೆಸದಿರಲು ನಿರ್ಧರಿಸಿರುವುದಾಗಿ ತಿಳಿಸಿತ್ತು.
ಇನ್ನು ರಾಜ್ಯದ ಶಿರಾ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕವನ್ನು ಘೋಷಿಸಲಾಗಿದೆ. ಶಾಸಕ ಸತ್ಯನಾರಾಯಣ ಅವರ ನಿಧನದಿಂದಾಗಿ ತೆರವಾಗಿದ್ದ ಶಿರಾ ಕ್ಷೇತ್ರ ಹಾಗೂ ಶಾಸಕ ಮುನಿರತ್ನ ಅವರ ರಾಜೀನಾಮೆಯಿಂದ ತೆರವಾಗಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪಚುನಾವಣೆಯು ನವೆಂಬರ್ 3ರಂದು ನಡೆಯುವುದಾಗಿ ಕೇಂದ್ರ ಚುನಾವಣೆ ಆಯೋಗ ಘೋಷಿಸಿದೆ. ಅಕ್ಟೋಬರ್ 9 ರಂದು ಅಧಿಸೂಚನೆ ಹೊರಡಿಸಲಿದ್ದು, ಅಕ್ಟೋಬರ್ 16 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಅಕ್ಟೋಬರ್ 17ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ.