ನವದೆಹಲಿ, ಸೆ. 29 (DaijiworldNews/MB) : ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರನ್ನು ಇನ್ನೆಷ್ಟು ದಿನಗಳ ಕಾಲ ಹಾಗೂ ಯಾವ ಆದೇಶದ ಮೇಲೆ ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಜಮ್ಮು-ಕಾಶ್ಮೀರ ಸರ್ಕಾರವನ್ನು ಪ್ರಶ್ನಿಸಿದೆ.
ತಮ್ಮ ತಾಯಿ ಮೆಹಬೂಬ ಮುಫ್ತಿ ಅವರನ್ನು ಕೂಡಲೇ ಗೃಹ ಬಂಧನದಿಂದ ಬಿಡುಗಡೆ ಮಾಡುವಂತೆ ಕೋರಿ ಸುಪ್ರಿಂ ಕೋರ್ಟ್ಗೆ ಮೆಹಬೂಬ ಮುಫ್ತಿಯವರ ಪುತ್ರಿ ಇಲ್ತಿಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಇಬ್ಬರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ, ಜಮ್ಮು-ಕಾಶ್ಮೀರ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿದೆ.
ಮೆಹಬೂಬ ಮುಫ್ತಿ ಪುತ್ರಿ ಇಲ್ತಿಜಾ ಪರವಾಗಿ ವಾದ ಮಂಡನೆ ಮಾಡಿದ ಹಿರಿಯ ವಕೀಲ ನಿತ್ಯ ರಾಮಕೃಷ್ಣನ್ ಅವರು, ಸರ್ಕಾರವು ಮೆಹಬೂಬ ಮುಫ್ತಿ ಅವರಿಗೆ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ಅವಕಾಶವನ್ನು ನೀಡುತ್ತಿಲ್ಲ ಎಂದು ಆರೋಪ ಮಾಡಿದರು.
ಈ ಎಲ್ಲಾ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒಂದು ವಾರಗಳ ಕಾಲವಕಾಶ ನೀಡಿದ್ದು ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿದೆ.
2019 ರ ಆಗಸ್ಟ್ 5ರಂದು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370ನ್ನು ರದ್ದು ಮಾಡಲಾಗಿದ್ದು ಆ ಬಳಿಕ ಮೆಹಬೂಬ ಮುಫ್ತಿ, ಫಾರೂಕ್ ಅಬ್ದುಲ್ಲಾ ಸೇರಿದಂತೆ ಅನೇಕ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಮಾರ್ಚ್ನಲ್ಲಿ ಫಾರೂಕ್ ಅಬ್ದುಲ್ಲಾ ಮತ್ತು ಅವರ ಪುತ್ರ ಒಮರ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಲಾಗಿದೆ. ಆದರೆ ಮೆಹಬೂಬ ಮುಫ್ತಿ ಅವರನ್ನು ಇನ್ನೂ ಕೂಡಾ ಗೃಹ ಬಂಧನದಲ್ಲಿ ಇರಿಸಲಾಗಿದೆ.